ಅಮೆರಿಕದಲ್ಲೂ ‘ರಾಣಾ ಅಯೂಬ್’ ಥರದ ಚೋರರು, ಕಪ್ಪು ಜನಾಂಗವರ ನ್ಯಾಯದ ಹೆಸರಲ್ಲಿ ದಗಾ?

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

‘ಬ್ಲಾಕ್ ಲೀವ್ಸ್ ಮ್ಯಾಟರ್ಸ್’ ಅರ್ಥಾತ್ ಕಪ್ಪುಜನರ ಬದುಕಿಗೆ ಬೆಲೆಯಿದೆ ಎಂಬ ಅಭಿಯಾನ ಕೆಲ ತಿಂಗಳುಗಳ ಹಿಂದೆ ಅಮೆರಿಕದಲ್ಲಿ ತೀವ್ರವಾಗಿತ್ತು. ಪೊಲೀಸ್ ಅಧಿಕಾರಿಯೊಬ್ಬ ಕಪ್ಪು ಜನಾಂಗಕ್ಕೆ ಸೇರಿದ ನಾಗರಿಕನನ್ನು ನೆಲಕ್ಕೆ ಬೀಳಿಸಿ ಏತನ ಕುತ್ತಿಗೆ ಮೇಲೆ ಮೊಣಕಾಲನ್ನಿಟ್ಟ ಚಿತ್ರ ಅಮೆರಿಕದಲ್ಲಿ ಮಾತ್ರವಲ್ಲದೇ ಜಗತ್ತಿನಲ್ಲೇ ದೊಡ್ಡಮಟ್ಟದ ಆಕ್ರೋಶ ಹುಟ್ಟುಹಾಕಿತ್ತು.

ಆಗ ಶುರುವಾದ ‘ಬ್ಲಾಕ್ ಲೀವ್ಸ್ ಮ್ಯಾಟರ್ಸ್’ ದೇಣಿಗೆ ಸಂಗ್ರಹವೂ ನಡೆಯಿತು. ಇದೀಗ ‘ನ್ಯೂಯಾರ್ಕ್ ಪೋಸ್ಟ್’ ಮಾಡಿರುವ ವರದಿ ಪ್ರಕಾರ ಈ ಅಭಿಯಾನದ ಮುಂಚೂಣಿಯಲ್ಲಿದ್ದು ಹಣ ಸಂಗ್ರಹಿಸಿದ ಮಹಿಳೆಯರು ಆ ಹಣದಲ್ಲಿ ತಮಗಾಗಿ ದುಬಾರಿ ಬಂಗಲೆಯೊಂದನ್ನು ಖರೀದಿಸಿಕೊಂಡಿದ್ದಾರೆ. ಕಪ್ಪು ಜನಾಂಗದವರ ಸಹಾಯಕ್ಕೆ ಅಂತ ಜನರಿಂದ ಸಂಗ್ರಹಿಸಿರುವ ಹಣದಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ 6 ಮಿಲಿಯನ್ ಡಾಲರ್ ಮೊತ್ತದ ಮನೆ ಖರೀದಿಸಿದ್ದಾರೆ ‘ಬ್ಲಾಕ್ ಲೀವ್ಸ್ ಮ್ಯಾಟರ್ಸ್’ ಅಭಿಯಾನದ ಮುಂಚೂಣಿಯಲ್ಲಿದ್ದ ಪ್ಯಾಟ್ರಿಸೆ ಕಲ್ಲರ್ಸ್, ಅಲಿಸಿಯಾ ಗರ್ಜಾ ಮತ್ತು ಮೆಲಿನಾ ಅಬ್ದುಲ್ಲಾ.

ತಾವೇ ಚಿತ್ರೀಕರಿಸಿದ್ದ ವಿಡಿಯೋದಲ್ಲೇ ಇವರು ಈ ವೈಭವೋಪೇತ ಮನೆಯ ವಿವರಗಳನ್ನು ಬಿಟ್ಟುಕೊಟ್ಟಿದ್ದಾರೆ. ಇದರ ಬೆನ್ನುಹತ್ತಿಹೋದ ಪತ್ರಿಕೆ, ಇವರೆಲ್ಲ ‘ಬ್ಲಾಕ್ ಲೀವ್ಸ್ ಮ್ಯಾಟರ್ಸ್’ಗಾಗಿ ಸಂಗ್ರಹಿಸಿದ ಹಣದಲ್ಲೇ ಇದನ್ನು ಖರೀದಿಸಿರುವುದು ಎಂದಿದೆ.

ನಾವೆಲ್ಲ ಸತ್ಯದ ಪರವಾಗಿ ಹೋರಾಡುತ್ತಿರುವುದರಿಂದ ಈ ರೀತಿ ಆರೋಪಗಳನ್ನು ಹೊರೆಸಲಾಗುತ್ತಿದೆ ಎಂದು ಈ ಮಹಿಳೆಯರು ಪ್ರತಿಕ್ರಿಯಿಸಿದ್ದಾರಾದರೂ ಆ ಮನೆಯ ಸಂಬಂಧದ ಯಾವುದೇ ಪ್ರಶ್ನೆಗಳಿಗೆ ನಿಖರ ಉತ್ತರ ಕೊಟ್ಟಿಲ್ಲ.

ರಾಣಾ ಅಯೂಬ್ ಮಾದರಿ

ಭಾರತದಲ್ಲೂ ರಾಣಾ ಅಯೂಬ್ ಎಂಬ ಪತ್ರಕರ್ತೆ ಕೋವಿಡ್ ಸಹಾಯಕ್ಕೆ ಎಂದು ಹಣ ಸಂಗ್ರಹಿಸಿ ಅದನ್ನು ತನ್ನ ಮತ್ತು ತನ್ನ ತಂದೆಯ ವೈಯಕ್ತಿಕ ಖಾತೆಗಳಿಗೆ ವರ್ಗಾಯಿಸಿ, ವೈಯಕ್ತಿಕ ಬಳಕೆಗೆ ಸಾರ್ವಜನಿಕ ಹಣ ಬಳಸಿಕೊಂಡು ಈಗ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿದ್ದಾರೆ.

ಈಕೆ ಸಹ, ತನ್ನ ಮೇಲಿನ ಆರೋಪಗಳಿಗೆ ಉತ್ತರ ಕೊಡದೇ, ತಾನು ಮೋದಿ ಸರ್ಕಾರದ ವಿರುದ್ಧ ಬರೆಯುವುದರಿಂದ ಹೀಗೆಲ್ಲ ಆಗುತ್ತಿದೆ ಎನ್ನುವ ಮೂಲಕ ತನ್ನ ಅಪರಾಧ ಮುಚ್ಚಿಟ್ಟುಕೊಳ್ಳುವ ಪ್ರಯತ್ನಗಳನ್ನು ಮಾಡುತ್ತ ಬಂದಿರುವುದು ಸ್ಪಷ್ಟ.

ಇದೀಗ ಅಮೆರಿಕದಲ್ಲೂ ಒಂದು ರಾಣಾ ಅಯೂಬ್ ಮಾದರಿ ತೆರೆದುಕೊಳ್ಳುತ್ತಿದ್ದು, ಈ ಬಗೆಯ ಸಾಮಾಜಿಕ ಕಾರ್ಯಕರ್ತರು ಯಾವುದೇ ಭಾವನಾತ್ಮಕ ವಿಷಯ ಇಟ್ಟುಕೊಂಡು ಹಣ ಸಂಗ್ರಹಕ್ಕೆ ಮುಂದಾದಾಗ ಅವರ ಅನುಯಾಯಿಗಳು ದೇಣಿಗೆ ಕೊಡುವ ಮುಂಚೆ ಯೋಚಿಸಬೇಕಾಗಿರುವ ಪಾಠವನ್ನು ಈ ಪ್ರಕರಣಗಳು ಸಾರುತ್ತಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!