ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ಹತ್ತು ದಿನಗಳ ಕಾಲ ನಡೆಯಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರತಿಪಕ್ಷಗಳು ಪ್ರತಿಭಟನೆಗೆ ಸಜ್ಜಾಗಿವೆ. ಅಧಿವೇಶನದ ಮೊದಲ ದಿನ ರಾಜ್ಯಪಾಲರು ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದರೆ, ವಿರೋಧ ಪಕ್ಷದ ಸದಸ್ಯರು ಕಪ್ಪು ಪಟ್ಟಿ ಧರಿಸಿ ಸದನದೊಳಗೆ ಕುಳಿತಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಸಹಿತ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರು ತಮ್ಮ ತೋಳಿಗೆ ಕಪ್ಪು ಪಟ್ಟಿಯನ್ನು ಧರಿಸಿ ಸಭೆಯಲ್ಲಿ ಭಾಗಿಯಾಗಿದ್ದಾರೆ. ರಾಜ್ಯಾದ್ಯಂತ ಭುಗಿಲೆದ್ದ ಹಿಜಾಬ್ – ಕೇಸರಿ ಶಾಲು ವಿವಾದವನ್ನು ನಿಯಂತ್ರಿಸಲು ಸರಕಾರ ವಿಫಲಗೊಂಡಿದೆ. ಈ ವಿವಾದವನ್ನು ನಿಯಂತ್ರಿಸದೇ ವಿದ್ಯಾರ್ಥಿಗಳ ಮನಸ್ಸಲ್ಲಿ ವಿಷ ಬೀಜ ಬಿತ್ತುತ್ತಿರುವ ಸರಕಾರದ ನಡೆಯನ್ನು ವಿರೋಧಿಸಿ ನಾವು ಕಪ್ಪು ಪಟ್ಟಿ ಧರಿಸಿರುವುದಾಗಿ ವಿಪಕ್ಷದವರು ಹೇಳಿದ್ದಾರೆ.
ರಾಜ್ಯಪಾಲರು ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡುವ ವೇಳೆ ಯಾವುದೇ ಪ್ರತಿಭಟನಾ ಪ್ರದರ್ಶನಕ್ಕೆ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಕೆಲವು ವಿಪಕ್ಷ ಸದಸ್ಯರು ತಮ್ಮ ತೋಳಿಗೆ ಕಪ್ಪು ಪಟ್ಟಿಯನ್ನು ಧರಿಸಿದ್ದಾರೆ.