Wednesday, August 10, 2022

Latest Posts

ಕೊವಿಶೀಲ್ಡ್ ಲಸಿಕೆ ತೆಗೆದುಕೊಂಡವರಲ್ಲಿ ಕೆಲವೇ ಕೆಲವರಲ್ಲಿ ರಕ್ತ ಸ್ರಾವ, ರಕ್ತಹೆಪ್ಪುಗಟ್ಟುವಿಕೆ ಕಾಣಿಸಿಕೊಂಡಿದೆ: ಕೇಂದ್ರ ಆರೋಗ್ಯ ಸಚಿವಾಲಯ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………….

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊವಿಶೀಲ್ಡ್ ಲಸಿಕೆಯ ಪ್ರತಿ ಹತ್ತು ಲಕ್ಷ ಡೋಸ್‌ ಪೈಕಿ 0.61 ಡೋಸ್ ನಲ್ಲಿ ಹೆಪ್ಪುಗಟ್ಟುವಿಕೆ ಮತ್ತು ರಕ್ತಸ್ರಾವದ ಘಟನೆಗಳು ಭಾರತದಲ್ಲಿ ವರದಿಯಾಗಿದೆ ಎಂದು ರೋಗನಿರೋಧಕ ನಂತರದ ರಾಷ್ಟ್ರೀಯ ಪ್ರತಿಕೂಲ ಘಟನೆಗಳ(ಎಇಎಫ್‌ಐ) ಸಮಿತಿ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ತಿಳಿಸಿದೆ.
ಎಇಎಫ್‌ಐ ಸಮಿತಿಯು 498 ಗಂಭೀರ ಮತ್ತು ತೀವ್ರವಾದ ಘಟನೆಗಳ ಆಳವಾದ ಪ್ರಕರಣದ ಪರಿಶೀಲನೆಯನ್ನು ಪೂರ್ಣಗೊಳಿಸಿದೆ. ಅದರಲ್ಲಿ 26 ಪ್ರಕರಣಗಳು ಸಂಭಾವ್ಯ ಥ್ರಂಬೋಎಂಬೊಲಿಕ್ ಎಂದು ವರದಿಯಾಗಿದೆ (ರಕ್ತನಾಳದಲ್ಲಿ ಹೆಪ್ಪುಗಟ್ಟುವಿಕೆಯಿಂದಾಗಿ ಒಡೆಯಬಹುದು ) ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ 10 ಲಕ್ಷ ಡೋಸ್ ಗಳಲ್ಲಿ 0.61 ಪ್ರಕರಣಗಳು ಈ ರೀತಿ ವರದಿ ಆಗಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕೃತ ಪ್ರಕಟಣೆಯಲ್ಲಿ ಹೇಳಿದೆ.
ಕೋವಿಶೀಲ್ಡ್ ನಿಂದ ಬ್ರಿಟನ್ ಮತ್ತು ಜರ್ಮನ್ ಗಿಂತಲೂ ಭಾರತದಲ್ಲಿ ಅತಿ ಕಡಿಮೆ ಅಪಾಯ ಕಂಡುಬಂದಿದ್ದು, ಬ್ರಿಟನ್ ನಲ್ಲಿ ಅಸ್ಟ್ರಾಜೆನೆಕಾ(ಭಾರತದಲ್ಲಿ ಕೋವಿಶೀಲ್ಡ್) ವ್ಯಾಕ್ಸಿನೇಷನ್ ನಿಂದ ಮಿಲಿಯನ್‌ಗೆ 4 ರಕ್ತ ಹೆಪ್ಪುಗಟ್ಟುವಿಕೆ ಪ್ರಕರಣಗಳ ಕಂಡುಬಂದಿದ್ದು, ಜರ್ಮನಿಯಲ್ಲಿ ಮಿಲಿಯನ್‌ಗೆ 10 ಪ್ರಕರಣಗಳು ವರದಿಯಾಗಿವೆ ಎಂದು ಸಮಿತಿ ಹೇಳಿದೆ.
ಭಾರತದಲ್ಲಿ ಸುಮಾರು 7.5 ಕೋಟಿ ಡೋಸ್ ಕೋವಿಡ್ ಲಸಿಕೆಗಳ ನಂತರ 684 ಜಿಲ್ಲೆಗಳಿಂದ ಒಟ್ಟು 23,000 ಎಇಎಫ್‌ಐ ವರದಿಯಾಗಿದೆ ಎಂದು ಸಮಿತಿ ತಿಳಿಸಿದೆ. ಈ ಪೈಕಿ 700 ಗಂಭೀರ ಅಥವಾ ತೀವ್ರ ಸ್ವರೂಪದ್ದಾಗಿತ್ತು. ಕೋವಾಕ್ಸಿನ್ ಲಸಿಕೆಯಲ್ಲಿ ಯಾವುದೇ ರಕ್ತ ಹೆಪ್ಪುಗಟ್ಟುವಿಕೆಯ ಪ್ರಕರಣಗಳು ದಾಖಲಾಗಿಲ್ಲ ಎಂದು ಸಮಿತಿ ಹೇಳಿದೆ.
ಭಾರತದಲ್ಲಿ ಇಲ್ಲಿಯವರೆಗೆ ಶೇ. 90 ರಷ್ಟು ಮಂದಿಗೆ ಕೋವಿಶೀಲ್ಡ್ ಲಸಿಕೆಗಳನ್ನು ನೀಡಲಾಗಿದ್ದು, ಉಳಿದವರಿಗೆ ಕೋವಾಕ್ಸಿನ್ ನೀಡಲಾಗಿದೆ.
ಭಾರತದಲ್ಲಿ ಕೊವಿಡ್ -19 ವ್ಯಾಕ್ಸಿನೇಷನ್ ನಂತರ ರಕ್ತಸ್ರಾವ ಮತ್ತು ಹೆಪ್ಪುಗಟ್ಟುವಿಕೆ ಪ್ರಕರಣಗಳು ಕಡಿಮೆ ಮತ್ತು ದೇಶದಲ್ಲಿ ಈ ಪರಿಸ್ಥಿತಿಗಳ ರೋಗನಿರ್ಣಯದ ನಿರೀಕ್ಷೆಗೆ ಅನುಗುಣವಾಗಿರುತ್ತವೆ ಎಂದು ರಾಷ್ಟ್ರೀಯ ಎಇಎಫ್‌ಐ (ರೋಗನಿರೋಧಕ ನಂತರದ ಪ್ರತಿಕೂಲ ಘಟನೆ) ಸಮಿತಿಯು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.
ರಾಷ್ಟ್ರೀಯ ಎಇಎಫ್‌ಐ ಸಮಿತಿ 2021 ರ ಏಪ್ರಿಲ್ 3 ರ ಹೊತ್ತಿಗೆ ಕನಿಷ್ಠ 7.5 ಕೋಟಿ (75,435,381) ಲಸಿಕೆ ಡೋಸ್ ನೀಡಲಾಗಿದೆ (ಕೋವಿಶೀಲ್ಡ್ – 68,650,819; ಕೊವಾಕ್ಸಿನ್ – 6,784,562). ಈ ಪೈಕಿ 65,944,106 ಮೊದಲ ಡೋಸ್ ಮತ್ತು 9,491,275 ಅನ್ನು ಎರಡನೇ ಡೋಸ್ ಆಗಿ ನೀಡಲಾಗಿದೆ.
ಕೋವಿಡ್ -19 ವ್ಯಾಕ್ಸಿನೇಷನ್ ಡ್ರೈವ್ ಅನ್ನು ಜನವರಿ 16, 2021 ರಂದು ಪ್ರಾರಂಭಿಸಿದಾಗಿನಿಂದ, ದೇಶದ 753 ಜಿಲ್ಲೆಗಳಲ್ಲಿ 684 ರಿಂದ ಕೋ-ವಿನ್ ಪ್ಲಾಟ್‌ಫಾರ್ಮ್ ಮೂಲಕ ಕನಿಷ್ಠ 23,000 ಪ್ರತಿಕೂಲ ಘಟನೆಗಳು ವರದಿಯಾಗಿವೆ. ಇವುಗಳಲ್ಲಿ ವರದಿಯ ಪ್ರಕಾರ ಕೇವಲ 700 ಪ್ರಕರಣಗಳು- ಪ್ರತಿ ಹತ್ತು ಲಕ್ಷ ಡೋಸ್‌ಗೆ 9.3 ಪ್ರಕರಣಗಳ ದರದಲ್ಲಿ ಗಂಭೀರ ಮತ್ತು ತೀವ್ರ ಸ್ವರೂಪದಲ್ಲಿದೆ.
ಆರೋಗ್ಯ ಸಚಿವಾಲಯವು ಎಲ್ಲಾ ಕೋವಿಡ್ -19 ಲಸಿಕೆಗಳ ಸುರಕ್ಷತೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಅನುಮಾನಾಸ್ಪದ ಪ್ರತಿಕೂಲ ಘಟನೆಗಳ ವರದಿಯನ್ನು ಪರಿಶೀಲಿಸುತ್ತಿದೆ ಕೋವಿಡ್ -19 ಲಸಿಕೆ ಕೊವಿಶೀಲ್ಡ್ ಸೋಂಕುಗಳನ್ನು ತಡೆಗಟ್ಟಲು ಮತ್ತು ವಿಶ್ವದಾದ್ಯಂತ ಮತ್ತು ಭಾರತದಲ್ಲಿ ಕೋವಿಡ್ -19 ರ ಕಾರಣದಿಂದಾಗಿ ಸಾವುಗಳನ್ನು ಕಡಿಮೆ ಮಾಡಲು ಅಪಾರ ಸಾಮರ್ಥ್ಯವನ್ನು ಹೊಂದಿದೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss