Wednesday, August 17, 2022

Latest Posts

ದೇಹದಾನ ಮಾಡಿ ಇತರರಿಗೆ‌ ಮಾದರಿಯಾದ ಪ್ರೌಢ ಶಾಲಾ ಶಿಕ್ಷಕ

ಹೊಸ ದಿಗಂತ ವರದಿ, ಬಳ್ಳಾರಿ:

ಮೃತಪಟ್ಟ ಬಳಿಕ ನೇತ್ರದಾನ‌ ಮಾಡುವುದು, ಅಂತ್ಯಸಂಸ್ಕಾರ ಇಲ್ಲೇ, ಹೀಗೆ ನಡೆಯಬೇಕು ಎನ್ನುವುದು ಸಾಮಾನ್ಯ. ಆದರೇ, ಇಲ್ಲಿನ ಶಿಕ್ಷಕರೋಬ್ಬರು ಮೃತಪಟ್ಟ ಬಳಿಕ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ದೇಹ ದಾನ‌ಮಾಡಿ‌ ಇತರರಿಗೆ ಮಾದರಿಯಾಗಿದ್ದಾರೆ. ಜಿಲ್ಲೆಯ ಸಿರಗುಪ್ಪ ತಾಲೂಕಿನ ದೇಶನೂರು ಗ್ರಾಮದ ವೀರಶೈವ ವಿದ್ಯಾವರ್ಧಕ ಸಂಘದ ಸದಾಶಿವ ರೆಡ್ಡಿ ಪ್ರೌಢ ಶಾಲೆ ಶಿಕ್ಷಕ ಗಾಳಿ ಮಹೇಶ್ ದೇಹ ದಾನ ಮಾಡಿದವರು.
ಮಂಗಳವಾರ ಬೆಳಿಗ್ಗೆ ಶಿಕ್ಷಕರಿಗೆ ರಕ್ತದೊತ್ತಡ ಕಡಿಮೆಯಾಗಿ ಹೃದಯಾಘಾತದಿಂದ ನಿಧನರಾಗಿದ್ದು, ಈ ಹಿಂದೆ ಮಾಡಿಕೊಂಡ ಒಪ್ಪದಂತೆ ಅವರ ಕುಟುಂಬದ ಸದಸ್ಯರು ಇಲ್ಲಿನ ವಿಮ್ಸ್‌ ಮೆಡಿಕಲ್ ಕಾಲೇಜ್ ಗೆ ಶಿಕ್ಷಕರ ದೇಹ ದಾನ‌ಮಾಡಿ ಇತರರಿಗೆ‌ ಮಾದರಿಯಾಗಿದ್ದಾರೆ. ಮೃತರಿಗೆ ಒಬ್ಬ‌ ಪುತ್ರಿ, ಪತ್ನಿ ಇದ್ದು, ಅಪಾರ ಬಂಧು ಬಳಗವನ್ನು ಹೊಂದಿದ್ದಾರೆ. ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಶಿಕ್ಷಕರ ವೃಂದ ಸೇರಿದಂತೆ ಅವರ‌ ಕುಟುಂಬದ ಸದಸ್ಯರು ಆಸ್ಪತ್ರೆಗೆ ದೌಡಾಯಿಸಿ ಅಂತಿಮ ದರ್ಶನ‌ ಪಡೆದರು. ಇದಕ್ಕೂ ಮುನ್ನ ವಿಮ್ಸ್‌ ಮೆಡಿಕಲ್‌ ಕಾಲೇಜ್ ನ ಮುಖ್ಯಸ್ಥರು ಮೃತದೇಹ ವನ್ನು ವಶಕ್ಕೆ ಪಡೆಯುವ ಎಲ್ಲ ದಾಖಲೆಗಳ ಪ್ರಕ್ರೀಯೆ ನಡೆಸಿದರು. ನಂತರ ವಿಮ್ಸ್ ನ ಶರೀರ ರಚನಾ ಶಾಸ್ತ್ರ ವಿಭಾಗಕ್ಕೆ ಮೃತ ದೇಹವನ್ನು ಹಸ್ತಾಂತರಿಸಲಾಯಿತು.
ಇಡೀ ಕುಟುಂಬವೇ ಮಾದರಿ: ನಿಧನರಾದ ಶಿಕ್ಷಕ ಗಾಳಿ ಮಹೇಶ್ ಅವರ ತಂದೆ ಹಾಗೂ ತಾಯಿಯೂ ದೇಹ ದಾನ ಮಾಡಿದ್ದಾರೆ, ಅದರಂತೆ ಅವರ ಪುತ್ರ ಗಾಳಿ ಮಹೇಶ್ ಅವರೂ ದಾನ ಮಾಡಿ ಗಮನಸೆಳೆದಿದ್ದಾರೆ. ಅವರ ಪುತ್ರಿ ಆಶಾ ಹಾಗೂ ಅವರ ಪತ್ನಿಯೂ ಮತಪಟ್ಟ ಬಳಿಕ ದೇಹ ದಾನ ಮಾಡುವ ಸಂಕಲ್ಪ ಮಾಡಿದ್ದು, ಎಲ್ಲರ ಗಮನಸೆಳೆದಿದ್ದಾರೆ. ಸುದ್ದಿಗಾರರೊಂದಿಗೆ ಗಾಳಿ ಮಹೇಶ್ ಅವರ ಪುತ್ರಿ ಆಶಾ ಅವರು ಮಾತನಾಡಿ, ತಂದೆ ನಿಧನದ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ದೇಹ ದಾನ ಮಾಡಿರುವುದು ಹೆಮ್ಮೆ ಅನಿಸಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಈ ಒಪ್ಪಂದದ ಪತ್ರವನ್ನು ಎಲ್ಲರಿಗೂ ತೋರಿಸಿದ್ದರು. ಕೆಲ ದಿನಗಳಲ್ಲೇ ತಂದೆ ನಿಧನ ಸುದ್ದಿ ಕೇಳೆ ಇಡೀ‌ನಮ್ಮ ಕುಟುಂಬ ಚಿಂತೆಯಲ್ಲಿ ಮೊಳಗಿದೆ. ನಮ್ಮ ತಾತ ಹಾಗೂ ಅಜ್ಜಿಯವರೇ ದೇಹದಾನಕ್ಕೆ ಪ್ರೇರಣೆಯಾಗಿದ್ದಾರೆ. ಅದರಂತೆ ನಮ್ಮ ತಂದೆಯೂ ದೇಹದಾನ ಮಾಡಿದ್ದು, ನಾನು ಹಾಗೂ ನಮ್ಮ ತಾಯಿಯೂ ದೇಹದಾನ ಮಾಡುವ ಸಂಕಲ್ಪ ಮಾಡಿದ್ದೇವೆ, ಈ ಕುರಿತು ಒಪ್ಪಂದ ಪತ್ರಕ್ಕೂ ಸಹಿ ಹಾಕಲು‌ ಮುಂದಾಗಿದ್ದೇವೆ ಎಂದರು.
ಸರಳ ವ್ಯಕ್ತಿ, ಇತರರಿಗೆ ಮಾದರಿ: ಶಿಕ್ಷಕ ಗಾಳಿ ಮಹೇಶ್ ಅವರ ಸ್ನೇಹಿತ ಬಸವರಾಜ್ ಅವರು ಮಾತನಾಡಿ, ಮೃತರಾದ ಬಳಿಕ ದೇಹದಾನ ಮಾಡುವವರ ಸಂಖ್ಯೆ ತೀರಾ ಕಡಿಮೆ, ನೇತ್ರದಾನ ಮಾಡುವದನ್ನು ಕೇಳಿದ್ದೇವೆ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸ್ನೇಹಿತ ದೇಹವನ್ನೇ ದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಶಾಲೆಯಲ್ಲೂ ಒಳ್ಳೆಯ ಹೆಸರು ಮಾಡಿದ್ದು, ಸರಳ ವ್ಯಕ್ತಿ, ಯಾರನ್ನೂ ಮೇಲು, ಕೀಳು ಎನ್ನದೇ ಎಲ್ಲರನ್ನು ಸಮಾನವಾಗಿ ಕಾಣುವ ಸ್ವಭಾವ ಇವರದ್ದಾಗಿದೆ. ಸ್ನೇಹಿತನ ತಂದೆ ಹಾಗೂ ತಾಯಿಯೂ ದೇಹದಾನ ಮಾಡಿದ್ದು, ಅವರ ಪುತ್ರಿ ಹಾಗೂ ಪತ್ನಿಯವರೂ ಕೂಡಾ ದೇಹ ದಾನ ಮಾಡಲು ಮುಂದಾಗಿರುವುದು ಹೆಮ್ಮೆ ತಂದಿದೆ ಎಂದರು. ಈ ಸಂದರ್ಭದಲ್ಲಿ ವಿಮ್ಸ್ ಕಾಲೇಜಿನ ಮುಖ್ಯಸ್ಥರು, ಶಿಕ್ಷಕರ ಕುಟುಂಬದ ಸದಸ್ಯರು ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!