Tuesday, September 27, 2022

Latest Posts

ನೋವು ಮರೆತು ಸಾಧನೆಗೆ ಪಣತೊಟ್ಟು ಯಶಸ್ವಿಯಾದ ದಿಟ್ಟ ಮಹಿಳೆ: ಇಲ್ಲಿದೆ ಶಶಿಕಲಾ ಪ್ರಗತಿಯ ಹಾದಿ

ಹೊಸ ದಿಗಂತ ವರದಿ, ಮಂಗಳೂರು:

ಬಂಟ್ವಾಳ ತಾಲೂಕಿನ ನರಿಂಗಾನ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಕಲಾ ಸತೀಶ್. ೨೦೧೬ರಿಂದ ಹಾಲಿನ ಸಹಕಾರ ಸಂಘದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಬೆಳಗ್ಗೆ ಮತ್ತು ಸಂಜೆ ಮೋಂಟುಗೋಳಿ ಯಲ್ಲಿರುವ ಹಾಲಿನ ಸೊಸೈಟಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಕೈರಂಗಳ, ನರಿಂಗಾನ ಮತ್ತು ಮಂಜನಾಡಿ ಗ್ರಾಮದ ಹೈನುಗಾರರು ಕರೆ ಮಾಡಿದಾಗ ಹಸುಗಳಿಗೆ, ಕರುಗಳಿಗೆ ಚಿಕಿತ್ಸೆ ನೀಡಲು ವಿಳಂಬಿಸದೆ ತೆರಳುತ್ತಾರೆ. ಹಸುಗಳ ಗರ್ಭ ಫಲ ಪರೀಕ್ಷೆಯನ್ನೂ ಮಾಡುತ್ತಾರೆ. ಕೃತಕ ಗರ್ಭಧಾರಣಾ ಸೆಮೆನ್-ಇಂಜೆಕ್ಷನ್ ನೀಡುವುದರಲ್ಲೂ ಪರಿಣತಿ ಹೊಂದಿದ್ದಾರೆ.

ಬೀಡಿ ಕೆಲಸವನ್ನೂ ಕಲಿತಿದ್ದ ಶಶಿಕಲಾ
ಶಶಿಕಲಾ ಕುಂಬ್ಳೆ ಸಮೀಪದ ಕಳತ್ತೂರು ಎಂಬ ಹಳ್ಳಿಯ ಕೂಲಿ ದಂಪತಿಯ ಪುತ್ರಿ. ಮೂವರು ಸಹೋದರರ ಒಡಗೂಡಿ ಬಡತನದಲ್ಲಿ ಬೆಳೆದಾಕೆ. ಬಾಲ್ಯದ ಸಂಗತಿಗಳನ್ನು ಹೇಳುವಾಗ ಈಕೆಯ ಕಣ್ಣುಗಳು ತೇವಗೊಳ್ಳುತ್ತವೆ. 8ನೆಯ ತರಗತಿಯಲ್ಲಿ ಇದ್ದಾಗ ತಂದೆ ತೀರಿಕೊಂಡರು. ಅದೇ ನೋವಿನಲ್ಲಿ ತಾಯಿ ಮಾನಸಿಕ ರೋಗಿಯಾದರು. ಮುಂದೆ ನಿಧಾನವಾಗಿ ಚೇತರಿಸಿಕೊಂಡ ತಾಯಿ ಬೀಡಿ ಸೂಪನ್ನು ಮತ್ತೆ ಮಡಿಲೇರಿಸಿಕೊಂಡರು. ಶಶಿಕಲಾ ಕೂಡಾ ಬೀಡಿ ಕೆಲಸವನ್ನು ಕಲಿತು ಮುಂದುವರಿದರು.

ಬದುಕು ಬದಲಾಯಿತು
ಹೀಗೆ 12 ವರ್ಷ ದಾಟಿತು. ಮನೆ ಪಕ್ಕ ಒಂದು ಆಯುರ್ವೇದಿಕ್ ಆಸ್ಪತ್ರೆ ಇತ್ತು. ಅಲ್ಲಿಗೆ ಶಶಿಕಲಾರನ್ನು ಅರೆಕಾಲಿಕ ಸ್ವೀಪರ್ ಕೆಲಸಕ್ಕೆ ಕರೆದರು. ಕಸ ಗುಡಿಸುವುದು ಮತ್ತು ವೈದ್ಯರು ಬರೆದುಕೊಟ್ಟ ಚೀಟಿ ಓದಿ ಮದ್ದು ಕಟ್ಟಿಕೊಡುವುದು ಈಕೆಯ ಕೆಲಸವಾಯಿತು. ಒಂದು ದಿನ ಆಸ್ಪತ್ರೆಯ ಸಿಬ್ಬಂದಿ ‘ನಿಮಗೆ ಪ್ರೈವೇಟಾಗಿ ಎಸ್‌ಎಸ್‌ಎಲ್‌ಸಿ ಮಾಡಬಹುದಲ್ಲ’ ಎಂದರು. ಅದರಿಂದ ಪ್ರೇರಿತಳಾಗಿ ಪರೀಕ್ಷೆಗೆ ಟ್ಯುಟೋರಿಯಲ್ ಮೂಲಕ ರೆಡಿ ಆಗುವಾಗ ‘ಮದುವೆಯ ಕಾಲಕ್ಕೆ ಶಾಲೆಗೆ ಹೋಗ್ತಾಳಂತೆ’ ಎಂದು ಜನ ಮಾತನಾಡಿಕೊಂಡರು. ಶಶಿಕಲಾ ಅದನ್ನು ಕಿವಿಗೆ ಹಾಕಿಕೊಳ್ಳದೆ ಪರೀಕ್ಷೆ ಬರೆದರು. ಫಲಿತಾಂಶ ಬಂದಾಗ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.

ಶಶಿಕಲಾ ಪಿಯುಸಿ ಬರೆಯುವಂತೆ ನವನಿಕೇತನ ಶಾಲೆಯ ಪ್ರಾಂಶುಪಾಲರು ಹುರಿದುಂಬಿಸಿದರು. ಮತ್ತೆ ಖಾಸಗಿಯಾಗಿ ಪಿಯುಸಿ ಪರೀಕ್ಷೆ ಬರೆದು ಫಲಿತಾಂಶ ಬಂದಾಗ ಪ್ರಥಮ ಶೇಣಿಯಲ್ಲಿ ಪಾಸಾಗಿದ್ದರು. ಶಶಿಕಲಾಗೆ ಟೀಟರ್ ಟ್ರೈನಿಂಗ್ ಮಾಡಬೇಕೆನಿಸಿತು. ಮಗಳು ಒದಬೇಕು ಎನ್ನುವಾಗ ತಾಯಿ ಮದುವೆ ಮಾತು ಆಡದೆ ಚಿನ್ನ ಅಡವಿಟ್ಟು ದುಡ್ಡು ಹೊಂದಿಸಿಕೊಟ್ಟರು. ಒಂದೂವರೆ ವರ್ಷದ ಡಿಎಂಇಡಿ ಕೋರ್ಸ್ ಮುಗಿಸಿದಾಗ ಕಂಬಳೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯ  ಉದ್ಯೋಗ ಸಿಕ್ಕಿತು.

ಅದೇ ಹೊತ್ತಿಗೆ ಕಲ್ಯಾಣ ಕೂಡಿ ಬಂತು. ಮಂಜನಾಡಿಯ ಫೋಟೋ ಗ್ರಾಫರ್ ಸತೀಶ್2008ರಲ್ಲಿ ಶಶಿಕಲಾರನ್ನು ವರಿಸಿದರು. ಆದರೆ ಮತ್ತೆ ಸಂಕಷ್ಟ ಬೆನ್ನು ಹತ್ತಿತು. ಪತಿಯ ಹತ್ತಿರದ ಇಬ್ಬರು ಬಂಧುಗಳು ಕಾಯಿಲೆ ಬಿದ್ದರು. ಆಸ್ಪತ್ರೆ ಓಡಾಟ, ಚಿಕಿತ್ಸೆ ಎಂದು ರಜೆಯ ಮೇಲೆ ರಜೆ ಮಾಡಬೇಕಾಗಿ ಬಂತು.
ಟೀಚರ್ ಕೆಲಸ ಹೋಯಿತು.

ಶ್ರದ್ಧೆಯಿಂದ ಉನ್ನತಿ
8 ವರ್ಷಗಳ ಬಳಿಕ ನರಿಂಗಾನದ ಹಾಲಿನ ಸೊಸೈಟಿಗೆ ಕೆಲಸಕ್ಕೆ ಸೇರಿದರು. ಕೆಲಸದ ಮೇಲಿನ ಶ್ರದ್ಧೆ ಶಶಿಕಲಾ ಅವರ ಉನ್ನತಿಗೆ ದಾರಿ ತೋರಿಸಿಕೊಟ್ಟಿತು. ಹಾಲು ಸೊಸೈಟಿಗಳ ಮೇಲ್ವಿಚಾರಕಿ ಜಾನಕಿ ಅವರು ದನಕರುಗಳಿಗೆ ಪ್ರಥಮ ಚಿಕಿತ್ಸೆ ನೀಡುವ ಅಲ್ಪಾವಧಿ ತರಬೇತಿಗೆ ಈಕೆಯನ್ನ್ನು ಆಯ್ಕೆ ಮಾಡಿ ಮೈಸೂರಿಗೆ ಕಳುಹಿಸಿದರು. 1 ತಿಂಗಳ ಕೋರ್ಸ್‌ನಲ್ಲಿ ಶಶಿಕಲಾ ತಂಡಕ್ಕೆ ಮೊದಲಿಗರಾದರು. ಮುಂದೆ ಕೃತಕ ಗರ್ಭಧಾರಣೆ ಸೆಮೆನ್-ಇಂಜೆಕ್ಷನ್ ನೀಡುವ ತಿಂಗಳ ಅಲ್ಪಾವಧಿ ಕೋರ್ಸ್‌ನಲ್ಲೂ ಶಶಿಕಲಾ ಮೊದಲಿಗರಾದರು.

ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣ
ಕೃತಕ ಗರ್ಭಧಾರಣಾ ಸೆಮನ್-ಇಂಜೆಕ್ಷನ್ ಕೊಡುವುದಕ್ಕೆ ಮುನ್ನ ಗರ್ಭ ಫಲ ಪರೀಕ್ಷೆ ಅಗತ್ಯ. ಅದನ್ನೂ ಕಲಿಯುವ ಮನಸ್ಸು ಮಾಡಿದರು ಶಶಿಕಲಾ.  ಆ ಅಲ್ಪಾವಧಿ ಕೋರ್ಸ್‌ನಲ್ಲೂ ಶಶಿಕಲಾ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದರು. ಇವರ ಸಾಧನೆಯ ಪಯಣ ಅಲ್ಲಿಗೇ ನಿಲ್ಲಲಿಲ್ಲ. ಬಡತನದ ಕಾರಣಕ್ಕೆ ನೃತ್ಯಭ್ಯಾಸವನ್ನು ಮೊಟಕುಗೊಳಸಿದ್ದ ಇವರು ಕುಂಬ್ಳೆಯ ತಾಯಿಮನೆ ಮತ್ತು ಮಂಜನಾಡಿಯ ಮನೆಯಲ್ಲಿ ನೃತ್ಯ ತರಗತಿಗಳನ್ನು ಆರಂಭಿಸಿದರು. ಅದಕ್ಕೂ ಉತ್ತಮ ಪ್ರತಿಕ್ರಿಯೆ ಬಂತು. ಪ್ರಸ್ತುತ ಕೊರೋನಾ ಕಾಟದಿಂದಾಗಿ ನೃತ್ಯ ತರಗತಿಗಳನ್ನು ಸ್ಥಗಿತಗೊಳಿಸಿದ್ದಾರೆ.

ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ
‘ಮೂರು ಗ್ರಾಮಗಳ ಜನ ಯಾವುದೇ ಹೊತ್ತಿನಲ್ಲಿ ನನ್ನ ಸೇವೆ ಬಯಸಿದರೂ ಅಲ್ಲಿ ತಲುಪುತ್ತೇನೆ. ಪತಿ, ಬಂಧುಗಳು ಮತ್ತು ಸಮಾಜ ನನ್ನ ಮೇಲೆ ತುಂಬಾ ವಿಶ್ವಾಸ ಇರಿಸಿದ್ದಾರೆ. ಅವರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಸೇವೆ ನೀಡುವುದು ನನ್ನ ಗುರಿ. ಮುಂದೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜ ಸೇವೆ ಮಾಡುವ ಬಯಕೆ ಇದೆ. ಅದಕ್ಕೆ ದೇವರು ಶಕ್ತಿ ಕೊಡಬೇಕು’ ಎನ್ನುತ್ತಾರೆ ಶಶಿಕಲಾ.
ಸೋಮವಾರ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮವೊಂದರಲ್ಲಿ ಶಶಿಕಲಾ ತನ್ನ ನೋವು – ನಲಿವನ್ನು ಎಲ್ಲರೊಂದಿಗೆ ಹಂಚಿಕೊಂಡರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!