ಬಾಂಬ್‌ ಬೆದರಿಕೆ ಕರೆ ಹಿನ್ನೆಲೆ: ಆರ್‌ಎಸ್‌ಎಸ್ ಕಚೇರಿಗಳಿಗೆ ಹೆಚ್ಚಿನ ಭದ್ರತೆಗೆ ಗೃಹ ಸಚಿವ ಆದೇಶ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯದ ಆರ್‌ಎಸ್‌ಎಸ್ ಕಚೇರಿಗಳ ಮೇಲೆ ದಾಳಿ ಬೆದರಿಕೆ ಸಂದೇಶ ಬಂದಿರುವ ಬೆನ್ನಲ್ಲೇ, ಎಲ್ಲಾ ಆರ್‌ಎಸ್‌ಎಸ್ ಕಚೇರಿಗಳಿಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಉತ್ತರ ಪ್ರದೇಶದ ಎರಡು ಹಾಗೂ ಕರ್ನಾಟಕದ ನಾಲ್ಕು ಆರ್‌ಎಸ್‌ಎಸ್ ಕಚೇರಿಗಳನ್ನು ಧ್ವಂಸಗೊಳಿಸುವುದಾಗಿ ವಾಟ್ಸಪ್ ಸಂದೇಶವೊಂದು ರವಾನೆಯಾಗಿತ್ತು.

ತಮಿಳುನಾಡಿನಿಂದ ವ್ಯಕ್ತಿಯೊಬ್ಬನ ಮೊಬೈಲ್‌ ನಂಬರ್‌ನಿಂದ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರಿಗೆ ಕಳಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೊಕದ್ದಮೆ ದಾಖಲು ಮಾಡಲಾಗಿದೆ. ಈ ಸಂಬಂಧ ವಾಟ್ಸಾಪ್ ಸಂದೇಶ ಕಳಿಸಿದ ವ್ಯಕ್ತಿಯನ್ನು ಗುರುತಿಸಲಾಗಿದ್ದು, ಆರೋಪಿತ ಸೆಂಥಿಲ್ ಎಂಬವನನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ಇಂತಹ ಬೆದರಿಕೆ ಕರೆ ಅಥವಾ ಸಂದೇಶಗಳನ್ನು ಕಳಿಸುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಶಂಕಿತ ಉಗ್ರನ ಬಂಧನ

ಭಯೋತ್ಪಾದನೆ ಚಟುವಟಿಕೆಗಳಲ್ಲಿ ತೊಡಗಿದ್ದ ಎನ್ನಲಾದ ಜಮ್ಮು ಕಾಶ್ಮೀರದ ವ್ಯಕ್ತಿಯೊಬ್ಬನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದ್ದು, ರಾಜ್ಯದ ಪೊಲೀಸರೂ ಈ ಕುರಿತು ತನಿಖೆ ಆರಂಭಿಸಿದ್ದಾರೆ. ನಗರದಲ್ಲಿ ನೆಲಸಿದ್ದ ಶಂಕಿತ ಉಗ್ರರಿಗೆ ಆಶ್ರಯ ನೀಡಿದ್ದ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಬಗ್ಗೆ ತನಿಖೆ ಶುರುವಾಗಿದೆ. ಕರ್ನಾಟಕ ರಾಜ್ಯ ಪೊಲೀಸರು, ಜಮ್ಮು ಕಾಶ್ಮೀರ ರಾಜ್ಯದ ಪೋಲೀಸರ ಜತೆ ಸಂಪರ್ಕದಲ್ಲಿದ್ದು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಬಂಧಿಸಲಾದ ಶಂಕಿತ ಉಗ್ರನಿಗೆ ನೆಲಸಲು ಅವಕಾಶ ಮಾಡಿಕೊಟ್ಟಿದ್ದಲ್ಲದೆ ಮೊಬೈಲ್ ಫೋನ್ ಹಾಗೂ ಇತರ ದಾಖಲೆಗಳನ್ನು ಪಡೆಯಲು ಸ್ಥಳೀಯರು ಸಹಾಯ ಮಾಡಿದ್ದಾರೆ ಎಂಬುದರ ಕುರಿತು ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಮೊಕದ್ದಮೆ ದಾಖಲಿಸಿ ಸೂಕ್ತ ಕಾನೂನು
ಕ್ರಮ ತೆಗೆದುಕೊಳ್ಳಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಅನ್ನು ಗಮನಿಸಿ

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!