ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ ಪ್ರಕರಣದಲ್ಲಿ ವಿಚಿತ್ರ ಸಂಗತಿ ಹೊರಬಿದ್ದಿದೆ. ಶಾಲೆಗಳಿಗೆ ಬೆದರಿಕೆ ಹಾಕಿದ್ದು, ಅದೇ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ರೋಹಿಣಿ ಶಾಲೆಗಳಿಗೆ ಇತ್ತೀಚಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿತ್ತು. ಇದರ ಜಾಡು ಹಿಡಿದು ಹೊರಟಾಗ ಅದೇ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಈ ಬೆದರಿಕೆ ಹಾಕಿದ್ದು ಪತ್ತೆಯಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಎರಡೂ ಶಾಲೆಗಳಿಗೆ ಅಲ್ಲೇ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಬಾಂಬ್ ಬೆದರಿಕೆಯ ಇಮೇಲ್ ಕಳುಹಿಸಿದ್ದಾರೆ. ತನಿಖೆಯ ವೇಳೆ ಐಪಿ ಅಡ್ರೆಸ್ನಿಂದಾಗಿ ಮಕ್ಕಳ ಮನೆಯನ್ನು ಪತ್ತೆ ಮಾಡಲಾಯಿತು. ವಿಚಾರಣೆಯ ವೇಳೆ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶಾಲಾ ಪರೀಕ್ಷೆಗಳಿಗೆ ತಾವು ಸಿದ್ಧರಾಗಿಲ್ಲದ ಕಾರಣ, ಪರೀಕ್ಷೆಗಳನ್ನು ಮುಂದೂಡಲು ಬಯಸಿ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದಾರೆ. ಇಬ್ಬರೂ ವಿದ್ಯಾರ್ಥಿಗಳಾಗಿದ್ದರಿಂದ ಕೌನ್ಸೆಲಿಂಗ್ ಮಾಡಿ, ಪೋಷಕರಿಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ದೆಹಲಿ ಶಾಲೆಗಳಿಗೆ ಬೆದರಿಕೆ ಕರೆಗಳು ಬರುತ್ತಿದ್ದ ಕಾರಣ, ಇದೇ ತಂತ್ರವನ್ನು ಬಳಸಿ ತಾವು ಪರೀಕ್ಷೆಯಿಂದ ತಪ್ಪಿಸಿಕೊಳ್ಳುವ ಯೋಜನೆ ಮಾಡಿದ್ದೆವು ಎಂದು ವಿದ್ಯಾರ್ಥಿಗಳು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.