ಪವಾರ್‌ ವಿರುದ್ಧ ಪೋಸ್ಟ್|‌ ವಿದಾರ್ಥಿ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಮಹಾ ಸರ್ಕಾರಕ್ಕೆ ಕೋರ್ಟ್‌ ತರಾಟೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಆಕ್ಷೇಪಾರ್ಹ ಟ್ವೀಟ್‌ ಮಾಡಿ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ 22 ವರ್ಷದ ವಿದ್ಯಾರ್ಥಿ ನಿಖಿಲ್ ಭಾಮರೆ ಬಿಡುಗಡೆ ಕುರಿತು ಬಾಂಬ್‌ ಹೈಕೋರ್ಟ್‌ನಲ್ಲಿ ನಿನ್ನೆ (ಜೂನ್ 13) ವಿಚಾರಣೆ ನಡೆದಿದೆ. ಈ ಬಗ್ಗೆ ಮಹಾರಾಷ್ಟ್ರದ ಮುಖ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಅರುಣಾ ಪೈ ಅವರಿಗೆ, ರಾಜ್ಯ ಗೃಹ ಸಚಿವಾಲಯದಿಂದ ಸೂಚನೆಗಳನ್ನು ತೆಗೆದುಕೊಳ್ಳುವಂತೆ ಮತ್ತು ನಾಸಿಕ್‌ನಿಂದ 22 ವರ್ಷದ ಫಾರ್ಮಸಿ ವಿದ್ಯಾರ್ಥಿ ನಿಖಿಲ್ ಭಾಮರೆ ಬಿಡುಗಡೆಗೆ ಆಕ್ಷೇಪಣಾ ರಹಿತ ಹೇಳಿಕೆ ಸಲ್ಲಿಸುವಂತೆ ಕೋರ್ಟ್ ಸೂಚಿಸಿದೆ.

ಶರದ್ ಪವಾರ್ ಅವರ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ ಮಾಡಿದ್ದರು ಎಂದು ಆರೋಪಿಸಿ ಭಾಮರೆ ವಿರುದ್ಧ ಆರು ಎಫ್‌ಐಆರ್ ದಾಖಲಿಸಿ ಅವರನ್ನು ಬಂಧಿಸಲಾಗಿತ್ತು. ಭಾರತೀಯ ದಂಡ ಸಂಹಿತೆಯ ಐಪಿಸಿ ಸೆಕ್ಷನ್ 153, 153A, (ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) 500, 501 (ಮಾನನಷ್ಟ), 504 (ಅಪರಾಧ ಬೆದರಿಕೆ), 505, 506 (ಸಾರ್ವಜನಿಕ ದುಷ್ಕೃತ್ಯಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದರ ಪರಿಣಾಮವಾಗಿ ಭಾಮರೆ ತನ್ನ ಎಲ್ಲಾ ಪರೀಕ್ಷೆಗಳಿಂದ ವಂಚಿತನಾಗಿದ್ದಾನೆ.

ಭಾಮರೆ ಪರ ವಕೀಲ ಸುಭಾಷ್ ಝಾ ಸಲ್ಲಿಸಿದ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ, ಹಾಗೂ ಮಧ್ಯಂತರ ಬಿಡುಗಡೆ ಮನವಿ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ಎಸ್ ಶಿಂಧೆ ಮತ್ತು ನ್ಯಾಯಮೂರ್ತಿ ಎಂಎನ್ ಜಾಧವ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ವಿಚಾರಣೆ ನಡೆಸಿತು. ವಿಚಾರಣೆಯ ಸಂದರ್ಭದಲ್ಲಿ ಎಫ್‌ಐಆರ್‌ನಲ್ಲಿ ಯಾವುದೇ ಹೆಸರನ್ನು ಉಲ್ಲೇಖಿಸಿಲ್ಲ ಆದರೂ ಭಾಮರೆ ಒಂದು ತಿಂಗಳಿನಿಂದ ಜೈಲಿನಲ್ಲಿದ್ದಾರೆ ಎಂಬ ಅಂಶವನ್ನು ನ್ಯಾಯಮೂರ್ತಿ ಶಿಂಧೆ ಗಮನಿಸಿದರು. ಪುಟ 48 ರಲ್ಲಿ ಯಾರ ಹೆಸರೂ ಪ್ರಸ್ತಾಪವಾಗಿಲ್ಲ (ಭಾಮರೆ ಪ್ರಾಥಮಿಕ ಟ್ವೀಟ್‌ನ ಉಲ್ಲೇಖ) ಅಂದಮೇಲೆ ಭಾಮರೆ ಜೈಲಿನಲ್ಲಿರಲು ಹೇಗೆ ಸಾಧ್ಯ..?ಎಂದು ನ್ಯಾಯಮೂರ್ತಿ ಪ್ರಶ್ನಿಸಿದ್ದಾರೆ.

ಅಲ್ಲದೇ, ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ವ್ಯಕ್ತಿಗೆ ಯಾವುದೋ ವಿದ್ಯಾರ್ಥಿಯೊಬ್ಬ ಮಾಡಿದ ಸಾಮಾಜಿಕ ಮಾಧ್ಯಮದ ಬರಹದಿಂದ ತೇಜೋವಧೆಯಾಗುತ್ತದೆ ಎಂದು ವಾದಿಸುವುದು ವಾಸ್ತವದಲ್ಲಿ ಶರದ್ ಪವಾರ್ ಅವರ ವ್ಯಕ್ತಿತ್ವ ಕುಗ್ಗಿಸಿದಂತಾಗುವುದಿಲ್ಲವೇ ಎಂದೂ ನ್ಯಾಯಾಲಯ ಪ್ರಶ್ನಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!