ಪ್ರವೀಣ್ ನೆಟ್ಟಾರ್ ಹತ್ಯೆ ಹಿನ್ನೆಲೆ: ಬೊಮ್ಮಾಯಿ ಸರ್ಕಾರದ ಜನೋತ್ಸವ ರದ್ದು

(ಸಂಗ್ರಹ ಚಿತ್ರ)

ಹೊಸ ದಿಗಂತ ವರದಿ, ಬೆಂಗಳೂರು

ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಒಂದು ವರ್ಷವಾಗುತ್ತಿರುವ ಸಂಭ್ರಮಕ್ಕೆ ಆಯೋಜಿಸಿದ ಸಾಧನಾ ಸಮಾರಂಭ, ಜನೋತ್ಸವ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.

ಮಧ್ಯರಾತ್ರಿ ತುರ್ತು ಸುದ್ದಿಗೋಷ್ಠಿ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಪ್ರವೀಣ್ ಹತ್ಯೆ ಸುದ್ದಿ ಬಂದಾಗಿನಿಂದ ಸಾಕಷ್ಟು ನೋವು, ತಳಮಳ ನನ್ನೊಳಗಿತ್ತು. ಅತ್ಯಂತ ಅಮಾಯಕ ಯುವಕನನ್ನು ಸಂಚಿನಿಂದ ಅಮಾನವೀಯವಾಗಿ ಕೊಂದಿರುವುದು ಖಂಡನೀಯ. ಮಾತಿನಲ್ಲಷ್ಟೇ ಅಲ್ಲ, ಎಲ್ಲರ ಮನಸಿನಲ್ಲೂ ಇದೆ ಎಂದರು.

ಹರ್ಷನ ಕೊಲೆಯಾದ ಕೆಲವೇ ತಿಂಗಳಲ್ಲಿ ಈ ಘಟನೆ ಘಾಸಿ ತಂದಿದೆ. ನಳಿನ್ ಕುಮಾರ್ ಕಟೀಲು ಅವರು ಸ್ಥಳಕ್ಕೆ ಹೋಗಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಸರ್ಕಾರಕ್ಕೆ 3 ವರ್ಷ ತುಂಬುತ್ತಿದೆ. ಹಲವು ಭರವಸೆ, ಯೋಜನೆ ಕೊಡಬೇಕೆಂಬ ಹಂಬಲ‌. ಜನಪರ ಕೆಲಸದ ಮೇಲೆ ಜನರಲ್ಲಿ ವಿಶ್ವಾಸ ಮೂಡಿ ಆತ್ಮವಿಶ್ವಾಸದಿಂದ ಬದುಕಬೇಕೆಂಬ ಅಪೇಕ್ಷೆ. ಇಡೀ ದಿನ ಬೇರೆ ಬೇರೆ ಕಾರ್ಯದಲ್ಲಿದ್ದೆ. ಮನಸ್ಸಿನಲ್ಲಿ ತಳಮಳ ಇತ್ತು. ತಾಯಿಯ ಆಕ್ರಂದನ ಕಂಡು ಮರುಗಿದ್ದೇನೆ. ಮನಸ್ಸಾಕ್ಷಿ ಒಪ್ಪುತ್ತಿಲ್ಲ. ಹೀಗಾಗಿ ದೊಡ್ಡಬಳ್ಳಾಪುರ ಹಾಗೂ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ಕಾರ್ಯಕ್ರಮಗಳನ್ನು ರದ್ದುಪಡಿಸುತ್ತಿದ್ದೇವೆ ಎಂದು ತಿಳಿಸಿದರು.

ಬಡಜನರು, ಪರಿಶಿಷ್ಟರ ಅಭಿವೃದ್ಧಿ ನಿರಂತರ ಆಗಬೇಕೆಂಬ ಕಾರಣಕ್ಕೆ ಸುದ್ದಿಗೋಷ್ಠಿಯಲ್ಲಿ ಕೆಲ ಕಾರ್ಯಕ್ರಮ ತಿಳಿಸುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!