ಜ.2-12ರ ವರೆಗೆ ಬಿಜೆಪಿಯಿಂದ ‘ಬೂತ್ ವಿಜಯ ಅಭಿಯಾನ’: ಸಚಿವ ಕೋಟ

ಹೊಸದಿಗಂತ ಡಿಜಿಟಲ್ ಡೆಸ್ಕ್‌ :

ಬೆಂಗಳೂರು: ಜನವರಿ 2 ರಿಂದ ಜನವರಿ 12ರ ವರೆಗೆ ರಾಜ್ಯ ಬಿಜೆಪಿ ವತಿಯಿಂದ ‘ಬೂತ್ ವಿಜಯ ಅಭಿಯಾನ’ವನ್ನು ಆಯೋಜಿಸಲಾಗಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಇಂದು ಬೆಳಗಾವಿ ಸುವರ್ಣ ಸೌಧದ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 58,156 ಬೂತ್‍ಗಳು, 11,642 ಶಕ್ತಿ ಕೇಂದ್ರಗಳು, 1,445 ಮಹಾ ಶಕ್ತಿ ಕೇಂದ್ರಗಳು, 312 ಮಂಡಲಗಳು, 39 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಅಭಿಯಾನ ನಡೆಯಲಿದೆ. ರಾಜ್ಯ, ಜಿಲ್ಲಾ, ತಾಲ್ಲೂಕು ಮಾತ್ರವಲ್ಲದೆ ಎಲ್ಲ ಘಟಕಗಳು, ಕಾರ್ಯಕರ್ತರು ಸೇರಿ 20 ಲಕ್ಷ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಇದೇ ವೇಳೆ ಪಕ್ಷದ ಕಾರ್ಯಕರ್ತರ ಹಾಗೂ ಮತದಾರರ 50 ಲಕ್ಷ ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ ಯುವ ಅರ್ಹ ಮತದಾರರನ್ನು ಮತಪಟ್ಟಿಯಲ್ಲಿ ಸೇರಿಸಲಾಗುವುದು, ಪ್ರತಿ ಬೂತ್‍ಗಳಲ್ಲಿ ಶೇ 100 ಮತದಾನ ಆಗುವ ರೀತಿಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಲಿದೆ.

ಅದೇ ರೀತಿ ಪ್ರಧಾನಿಯವರ “ಮನ್ ಕೀ ಬಾತ್” ವೆಬ್ ಲಿಂಕ್ ಅನ್ನು 60 ಸಾವಿರ ಗುಂಪುಗಳು ಡೌನ್‍ಲೋಡ್ ಮಾಡಿಸುವಂತೆ ಪ್ರೇರೇಪಿಸಿ ಕಾರ್ಯಾನುಷ್ಠಾನ ಮಾಡಲಾಗುವುದು. ಪ್ರತಿ ಬೂತ್‍ನಲ್ಲಿ ಮತದಾರರಿಗೆ ಜಾಗೃತಿ ಮೂಡಿಸುವ ಸಭೆಯನ್ನು ಮಾಡಲಿದ್ದೇವೆ ಎಂದು ತಿಳಿಸಿದರು.

ಈ ಅಭಿಯಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಎಲ್ಲ ಸಚಿವರು, ಬಿಜೆಪಿಯ ಎಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ರಾಜ್ಯ, ಜಿಲ್ಲೆ, ಮಂಡಲ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

ಈ ಅಭಿಯಾನದ ಯಶಸ್ಸಿಗಾಗಿ ರಾಜ್ಯ ಮಟ್ಟದ ಸಮಿತಿ ರಚಿಸಲಾಗಿದೆ. ಸಂಚಾಲಕರಾಗಿ ಕೋಟ ಶ್ರೀನಿವಾಸ ಪೂಜಾರಿ, ಸಹ ಸಂಚಾಲಕರಾಗಿ ಮಹೇಶ್ ಟೆಂಗಿನಕಾಯಿ, ಸದಸ್ಯರಾಗಿ ಹೇಮಲತಾ ನಾಯಕ್, ಅರುಣ್ ಶಹಾಪುರ, ರಾಜೇಂದ್ರ ಮೈಸೂರು, ಕೇಶವ ಪ್ರಸಾದ್ ಅವರನ್ನು ನೇಮಿಸಿದ್ದಾರೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಅವರು ಮಾತನಾಡಿ, ಬಿಜೆಪಿ ಕೇವಲ ಚುನಾವಣೆ ಬಂದಾಗ ಸಕ್ರಿಯವಾಗುವ ಪಕ್ಷವಲ್ಲ; ಅದು ನಿರಂತರ ಚಟುವಟಿಕೆಯಿಂದ ಕೂಡಿರುವ ಪಕ್ಷ ಎಂದರು.

ಕಳೆದ 2 ಚುನಾವಣೆಗಳಿಂದ ಪೇಜ್ ಪ್ರಮುಖ್ ನಿಯೋಜಿಸಿ ಕಾರ್ಯ ಮಾಡಿದ್ದು, ಈ ಬಾರಿ ಅದಕ್ಕೆ ಹೆಚ್ಚಿನ ಒತ್ತು ಕೊಡುತ್ತಿದ್ದೇವೆ. ಬಹುದೊಡ್ಡ ಅಭಿಯಾನ ಇದಾಗಲಿದೆ ಎಂದು ವಿವರಿಸಿದರು.

ವಿಧಾನ ಪರಿಷತ್ ಸದಸ್ಯ ಕೇಶವಪ್ರಸಾದ್, ರಾಜ್ಯ ವಕ್ತಾರ ಮತ್ತು ಶಾಸಕ ಪಿ.ರಾಜೀವ್, ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಅವರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!