ಗಡಿ ವಿವಾದ | ರಾಜಕೀಯ ಬೇಡ, ಕೋರ್ಟ್ ಆದೇಶದ ಬಳಿಕ ನಿರ್ಧಾರ: ಅಮಿತ್ ಶಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಗಡಿ ವಿವಾದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದುಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಮಹತ್ವದ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಶಾ ಉಭಯ ರಾಜ್ಯಗಳಿಗೆ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.

ಈ ಕುರಿತು ಸಭೆ ಬಳಿಕ ಮಾತನಾಡಿದ ಅಮಿತ್ ಶಾ , ಸುಪ್ರೀಂಕೋರ್ಟ್ ಆದೇಶವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ವಿಚಾರವನ್ನು ಎರಡು ರಾಜ್ಯಗಳು ರಾಜಕೀಯ ಚರ್ಚಾ ವಿಷಯವನ್ನಾಗಿ ಮಾಡಬಾರದು. ಸಮಸ್ಯೆ ಬಗೆಹರಿಸಲು ತಟಸ್ಥ ಸಮಿತಿಯನ್ನು ರಚಿಸಲಾಗುವುದು. ರಾಜಕೀಯ ಭಿನ್ನಾಭಿಪ್ರಾಯ ಏನೇ ಇರಲಿ. ಗಡಿಯಲ್ಲಿ ಶಾಂತಿಯನ್ನು ಸ್ಥಾಪಿಸಬೇಕಿದೆ. ನನಗೆ ವಿಶ್ವಾಸ ಇದೆ, ಎಲ್ಲರೂ ರಾಜಕೀಯ ನಾಯಕರು ಸಹಕರಿಸಲಿದ್ದಾರೆ ಎಂದು ಹೇಳಿದರು.

ಗಡಿ ಸಮಸ್ಯೆ ಏನೇ ಇದ್ದರೂ ಎರಡು ರಾಜ್ಯಗಳು ರಸ್ತೆಯಲ್ಲಿ ಗಲಾಟೆ ಮಾಡುವುದಲ್ಲ. ಇದು ಸಂವಿಧಾನದ ಅನುಸಾರವಾಗಿ ಮಾಡಬೇಕು. ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿರುವ ಕಾರಣ, ಯಾವುದೇ ರಾಜ್ಯ ಈ ಜಾಗ ನಮ್ಮದು ಎಂದು ಹೇಳಿಕೊಳ್ಳುವಂತಿಲ್ಲ ಎಂದು ಹೇಳಿದರು .

ಎರಡೂ ರಾಜ್ಯಗಳು ಸಮಿತಿ ರಚಿಸಲು ಒಪ್ಪಿಕೊಂಡಿದೆ. ಸದ್ಯ ಕಾನೂನು ಸುವ್ಯವಸ್ಥೆ ಕಾಪಾಡಲು ಎರಡು ರಾಜ್ಯಗಳು ಕ್ರಮ ಕೈಗೊಳ್ಳಲು ಒಪ್ಪಿಕೊಂಡಿದೆ. ಅನ್ಯ ಭಾಷಿಕರು, ಯಾತ್ರಿಕರು, ವ್ಯಾಪಾರಿಗಳಿಗೆ, ವಾಹನಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು, ಹಿರಿಯ ಐಪಿಎಸ್ ಅಧಿಕಾರಿಯನ್ನೊಳಗೊಂಡ ಸಮಿತಿಯನ್ನು ರಚಿಸಲು ಒಪ್ಪಿಕೊಂಡಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಇದೇ ವೇಳೆ ಎರಡು ರಾಜ್ಯದ ವಿಪಕ್ಷಗಳಲ್ಲಿ ಕೇಂದ್ರ ಗೃಹ ಸಚಿವನಾಗಿ ನಾನು ಮನವಿ ಮಾಡುತ್ತೇನೆ. ಗಡಿ ವಿಚಾರದಲ್ಲಿ ಯಾವುದೇ ರಾಜಕೀಯ ಬೇಡ. . ಅನ್ಯಭಾಷಿಕರಿಗೆ ಸಮಸ್ಯೆಯಾಗುತ್ತಿದೆ.ಎಲ್ಲಾ ಭಾಷಿಕರು ಶಾಂತಿಯುತವಾಗಿ ಜೀವನ ನಡೆಸಬೇಕು. ಹೀಗಾಗಿ ಈ ವಿಚಾರದಲ್ಲಿ ಯಾವುದೇ ರಾಜಕೀಯ ಬೇಡ ಎಂದು ಅಮಿತ್ ಶಾ ಹೇಳಿದ್ದಾರೆ.

ಸಂಸತ್ ಭವನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹಸಚಿವ ಆರಗ ಜ್ಞಾನೇಂದ್ರ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭಾಗಿಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!