ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿ ಪಾಕಿಸ್ತಾನದಿಂದ ಇಂದು (ಬುಧವಾರ) ನಡೆದ ಗುಂಡಿನ ದಾಳಿಯಲ್ಲಿ ಓರ್ವ ಅಪರಿಚಿತ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.
ಎಲ್ಒಸಿಯಲ್ಲಿ ಉಗ್ರರು ಒಳನುಸುಳುವಿಕೆ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಜಮ್ಮು ಕಾಶ್ಮೀರ ಪೊಲೀಸರು ಮತ್ತು ಸೇನಾ ಪಡೆಗಳು ಗಡಿಯಲ್ಲಿ ನುಸುಳುವಿಕೆ ಪತ್ತೆ ಮಾಡಿ ದಾಳಿ ನಡೆಸಿದೆ.
ಪ್ರತಿಕೂಲ ಹವಾಮಾನ ಮತ್ತು ಮಬ್ಬುಗತ್ತಲನ್ನು ಬಳಸಿಕೊಂಡು ಗಡಿ ದಾಟಲು ಯತ್ನಿಸುತ್ತಿದ್ದಾಗ ನಮ್ಮ ಪಡೆಗಳು ದಾಳಿ ನಡೆಸಿದವು. ಇದರಿಂದ ಓರ್ವ ಅಪರಿಚಿತ ಉಗ್ರ ಗುಂಡೇಟಿಗೆ ಬಲಿಯಾಗಿದ್ದಾನೆ. ಉಗ್ರರ ಯತ್ನವನ್ನು ವಿಫಲಗೊಳಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಭಯೋತ್ಪಾದಕರ ಗುಂಪು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ಕೂಡ ನಡೆಯಿತು. ಉಗ್ರರ ಉಪಟಳವನ್ನು ಹತ್ತಿಕ್ಕಲು ಗಡಿಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದರು.