ಹೊಸದಿಗಂತ ವರದಿ, ಸೋಮವಾರಪೇಟೆ:
ಸ್ಥಳೀಯ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯ ಸರ್ಕಾರ ಸೋಮವಾರಪೇಟೆ ಪಟ್ಟಣಕ್ಕೆ ಸ್ಥಳೀಯ ಯೋಜನಾ ಪ್ರದೇಶವನ್ನು ರಚಿಸಿ ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ತಹಶೀಲ್ದಾರ್ ಗೋವಿಂದರಾಜು ಗಡಿ ಗುರುತಿಸುವ ಕಾರ್ಯ ನಡೆಸಿದರು.
ಸ್ಥಳೀಯವಾಗಿ ಸರ್ಕಾರಿ ಹಾಗೂ ಖಾಸಗಿ ಅಭಿವೃದ್ಧಿ ಕಾಮಗಾರಿಗಳ ಮೇಲೆ ಕಣ್ಣಿಟ್ಟು ಕಾರ್ಯಗತಗೊಳಿಸುವುದರೊಂದಿಗೆ ಕಟ್ಟು ನಿಟ್ಟಾಗಿ ತೆರಿಗೆ ಸಂಗ್ರಹಿಸುವ ಮೂಲಕ ಆರ್ಥಿಕವಾಗಿ ಸದೃಢಗೊಳಿಸಲು ಮಡಿಕೇರಿಯ ಮೂಡಾ,ಹಾಗೂ ಕುಶಾಲನಗರ ಕುಡಾ ಮಾದರಿಯಲ್ಲಿ ಸೋಮವಾರಪೇಟೆ ಅಭಿವೃದ್ಧಿ ಪ್ರಾಧಿಕಾರ (ಸೂಡ) ರಚಿಸಲು ಸರ್ಕಾರ ಮುಂದಾಗಿದೆ.
ಸೋಮವಾರಪೇಟೆ ಪಟ್ಟಣ ಸೇರಿದಂತೆ ಹಾನಗಲ್ಲು ಕಂದಾಯ ಗ್ರಾಮದ 389.92,ಚೌಡ್ಲು ಕಂದಾಯಗ್ರಾಮದ 389.75, ನೇಗಳ್ಳೆಕರ್ಕಳ್ಳೆ ಯ 11.5, ನಗರೂರು ಗ್ರಾಮದ 302.5 ಸೇರಿದಂತೆ ಒಟ್ಟು 1086.67 ಹೆಕ್ಟೇರ್ ಪ್ರದೇಶ ಈ ಯೋಜನಾ ವ್ಯಾಪ್ತಿಗೆ ಒಳಪಡಲಿದೆ.
ಈ ಬಗ್ಗೆ 2020ರ ನವೆಂಬರ್ 20ರಲ್ಲಿ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಸಿ.ಎಸ್.ಶಿವಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಆದೇಶ ಹಾಗೂ ಜಿಲ್ಲಾಧಿಕಾರಿಗಳ ಸೂಚನೆಯಂತೆ ತಹಶೀಲ್ದಾರ್ ಗೋವಿಂದರಾಜು ಸರ್ವೆ ಇಲಾಖೆ ಸಿಬ್ಬಂದಿಗಳೊಂದಿಗೆ ಸ್ಥಳೀಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಸಮ್ಮಖದಲ್ಲಿ ಸರ್ವೆ ನಡೆಸಿ ಗಡಿ ಗುರುತಿಸಿದರು.
ಆದೇಶದ ಬಗ್ಗೆ ಗೊಂದಲ: ಗಡಿ ಗುರುತಿಸುವಿಕೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದೆ ಚೌಡ್ಲು ಗ್ರಾಮ ಪಂಚಾಯ್ತಿಯ ಜನಪ್ರತಿನಿಧಿಗಳು ಹಾಗೂ ಅಭಿವೃದ್ಧಿ ಅಧಿಕಾರಿ ಆಕ್ಷೇಪ ವ್ಯಕಪಡಿಸಿದರು. ಸಂಪೂರ್ಣ ಕಂದಾಯ ಗ್ರಾಮ ಈ ಯೋಜನೆಗೆ ಒಳಪಡುತ್ತಿದೆ ಇನ್ನು ಪಂಚಾಯ್ತಿ ಏತಕ್ಕೆ, ಚುನಾವಣೆಯೇ ನಡೆಸಬಾರದಿತ್ತು. ಸೋಮವಾರಪೇಟೆ ಪಟ್ಟಣ ಪಂಚಾಯ್ತಿಯನ್ನು ಮೇಲ್ದರ್ಜೆಗೆ ಏರಿಸುವುದರಲ್ಲಿ ನಮ್ಮ ಆಕ್ಷೇಪವಿಲ್ಲ.
ಆದರೆ ಗ್ರಾಮ ಪಂಚಾಯ್ತಿಯೇ ಇಲ್ಲವಾಗುತ್ತಿದೆ ಎಂದು ಚೌಡ್ಲು ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹೇಶ್ ತಿಮ್ಮಯ್ಯ,ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ನತೀಶ್ ಮಂದಣ್ಣ, ಸುರೇಶ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಪಟ್ಟಣ ಪಂಚಾಯ್ತಿ ಸದಸ್ಯ ಎಸ್.ಮಹೇಶ್ ಮಾತನಾಡಿ, ಪಟ್ಟಣ ಪಂಚಾಯ್ತಿ ಮೇಲ್ದರ್ಜೆಗೆ ಏರಿಸುವ ಯೋಜನೆಗೂ ಇದಕ್ಕೂ ಸಂಬಂಧವಿಲ್ಲ. ಅಭಿವೃದ್ಧಿ ಪ್ರಾಧಿಕಾರ ರಚಿಸುವ ಉದ್ದೇಶದಿಂದ ಸರ್ಕಾರ ಈ ಆದೇಶ ಹೊರಡಿಸಿದೆ.ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿದ್ದರೂ ಕಂದಾಯ ಇಲಾಖೆ ದಾಖಲಾತಿಯಂತೆ ನಗರೂರು ಕಂದಾಯ ಗ್ರಾಮವೆಂದು ಗ್ರಾಮ ಪಂಚಾಯ್ತಿಗಳಲ್ಲಿ ಅಲ್ಪ ಪ್ರಮಾಣದ ತೆರಿಗೆ ಪಾವತಿಸಿ ಲೇಔಟ್ ಗಳನ್ನು ನಿರ್ಮಿಸಿ ಮಾರಾಟ ಮಾಡುತ್ತಿರುವುದು ಸೇರಿದಂತೆ ಗ್ರಾ.ಪಂ.ಮಟ್ಟದಲ್ಲಿ ಕಡಿಮೆ ಬೆಲೆಗೆ ಭೂಮಿ ಮಾರಾಟವಾಗುತ್ತಿರುವುದಕ್ಕೆ ಕಡಿವಾಣ ಬೀಳಲಿದೆಯೆಂದರು.
ಅಭಿವೃದ್ಧಿ ಪ್ರಾಧಿಕಾರ ರಚನೆಯಾದರೆ ಎಲ್ಲಾ ಪಂಚಾಯ್ತಿಗಳಿಗೂ ಅನುಕೂಲವಾಗುತ್ತದೆ ಈ ಬಗ್ಗೆ ಗೊಂದಲಗಳಿದ್ದರೆ ಮೂಡಾ,ಅಥವಾ ಕುಡಾ ಕಚೇರಿಗೆ ಭೇಟಿ ನೀಡಿ ಅನುಮಾನ ಪರಿಹರಿಸಿಕೊಳ್ಳೋಣ ಎಂದು ಸಲಹೆ ಮಾಡಿದರು.
ಸ್ಥಳೀಯ ಯೋಜನಾ ಪ್ರದೇಶ ಗಡಿ ಗುರುತಿಸಲು ಸರ್ಕಾರ ಆದೇಶ ಮಾಡಿದೆ ಅದರಂತೆ ನಾನು ಕರ್ತವ್ಯ ನಿರ್ವಹಿಸಬೇಕು ಎಂದು ತಹಶೀಲ್ದಾರ್ ಗೋವಿಂದರಾಜು ತಿಳಿಸಿದರು.
ಈ ಸಂದರ್ಭ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ನಳಿನಿಗಣೇಶ್,ಸದಸ್ಯ ಬಿ.ಆರ್.ಮಹೇಶ್,ಮುಖ್ಯಾಧಿಕಾರಿ ನಾಚಪ್ಪ, ಚೌಡ್ಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪೂರ್ಣಕುಮಾರ್, ನೇರುಗಳಲೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ನಯನಾ,ಕಂದಾಯ ಪರಿವೀಕ್ಷಕ ಪ್ರಹ್ಲಾದ್, ಗ್ರಾಮ ಲೆಕ್ಕಿಗರಾದ ಹೇಮಾವತಿ,ಶ್ವೇತಾ. ಪಟ್ಟಣ ಪಂಚಾಯ್ತಿ ಸಿಬ್ಬಂದಿಗಳಾದ ರಫೀಕ್,ಜೀವನ್ ಹಾಗೂ ಸರ್ವೆ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.