ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಬಾಕ್ಸ್ ಪತ್ತೆ: ತನಿಖೆಯಲ್ಲಿ ಬಯಲಾಯಿತು ಮಾಹಿತಿ

ಹೊಸದಿಗಂತ ವರದಿ,ಶಿವಮೊಗ್ಗ:

ನಗರದ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಎರಡು ಅನುಮಾನಸ್ಪದ ಕಬ್ಬಿಣದ ಪೆಟ್ಟಿಗೆಗಳನ್ನು ಹಣ ದ್ವಿಗುಣದ ಆಮಿಷ ಒಡ್ಡಿ ಜನರಿಗೆ ಮೋಸ ಮಾಡುತ್ತಿದ್ದ ವಂಚಕರ ತಂಡ ಇರಿಸಿತ್ತು ಎಂಬುದು ತನಿಖೆ ವೇಳೆ ಬಯಲಾಗಿದೆ.

ಮೂರು ದಿನಗಳ ಹಿಂದೆ ಶಿವಮೊಗ್ಗ ರೈಲ್ವೆ ನಿಲ್ದಾಣದ ಹೊರ ಭಾಗದಲ್ಲಿ ಪತ್ತೆಯಾಗಿದ್ದ ಪೆಟ್ಟಿಗೆಗಳನ್ನು ವಂಚನೆ ಪ್ರಕರಣಗಳಿಗೆ ಬಳಸಿಕೊಳ್ಳಲಾಗುತ್ತಿತ್ತು. ಇದೇ ರೀತಿ 2021 ರಲ್ಲಿ ಕೂಡ ತಿಪಟೂರಿನಲ್ಲಿ ಆರೋಪಿಗಳು ಬಾಕ್ಸ್‌ಗಳನ್ನು ಇಟ್ಟಿರುವುದು ಕಂಡುಬಂದಿದೆ ಎಂದು ಎಸ್ಪಿ ಮಿಥುನ್‌ಕುಮಾರ್ ತಿಳಿಸಿದ್ದಾರೆ.

ಪೆಟ್ಟಿಗೆಯಲ್ಲಿ ಉಪ್ಪು, ಹಳೆಯ ಕಾಗದ, ಅನುಪಯುಕ್ತ ವಸ್ತುಗಳನ್ನು ತುಂಬಿ, ಬಲವಾದ ಬೀಗ ಜಡಿದು, ಪೆಟ್ಟಿಗೆಯಲ್ಲಿ ಅಪಾರ ಪ್ರಮಾಣದ ಹಣವಿದೆ ಎಂದು ನಂಬಿಸಿ ಜನರನ್ನು ವಂಚಿಸಲಾಗುತ್ತಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಪ್ರಕರಣದಲ್ಲಿ ‘ಭದ್ರಾವತಿ ಮೂಲದ ಜಬೀವುಲ್ಲಾ ಹಾಗೂ ನಸ್ರುಲ್ಲಾ ಅವರನ್ನು ತಿಪಟೂರಿನಲ್ಲಿ ಬಂಧಿಸಲಾಗಿತ್ತು. ತನಿಖೆ ನಡೆಸಿದಾಗ ಸಾಲ ಕೊಡಿಸುತ್ತೇವೆಂದು ನಂಬಿಸಿ ಜನರಿಂದ ಕಮೀಷನ್ ರೂಪದಲ್ಲಿ ಹಣ ಪಡೆಯುವುದು ಬಳಿಕ ಅವರಿಗೆ ಸಾಲ ನೀಡದೇ ವಂಚಿಸುವುದನ್ನೇ ಉದ್ಯೋಗ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪೆಟ್ಟಿಗೆ ಸಿಕ್ಕ ಸ್ಥಳಕ್ಕೆ ಅವರಿಬ್ಬರನ್ನೂ ಕರೆದುಕೊಂಡು ಬಂದು ಮಹಜರು ನಡೆಸಿ ಹೇಳಿಕೆ ದಾಖಲಿಸಲಾಗಿದೆ. ತಿಪಟೂರಿನ ಗಿರೀಶ್ ಹಾಗೂ ಗೋವಾದ ರಾಜೇಶ್ ಎಂಬುವವರಿಗೆ ಹಣದ ಅವಶ್ಯಕತೆಯಿತ್ತು. ಅವರಿಬ್ಬರೂ ವಂಚಕರ ಸಂಪರ್ಕಕ್ಕೆ ಬಂದಿದ್ದಾರೆ. ನಮ್ಮ ಬಳಿ ಎರಡು ಪೆಟ್ಟಿಗೆಗಳಿವೆ. ಅದರಲ್ಲಿ ತಲಾ ಒಂದೊಂದು ಕೋಟಿ ರೂ. ಹಣವಿದೆ. ಅದನ್ನು ತಲುಪಿಸುವುದು ಕಷ್ಟ ಎಂದು ಜಬೀವುಲ್ಲಾ ಹಾಗೂ ನಸ್ರುಲ್ಲಾ ಮಾಹಿತಿ ನೀಡಿದ್ದರು. ಹಣ ಸಾಗಣೆ ಮಾಡಲು ಬೇಕು ಎಂದು ಲಕ್ಷಾಂತರ ರೂ. ಹಣವನ್ನು ಆರೋಪಿಗಳು ವಸೂಲು ಮಾಡಿದ್ದರು.
2 ಕೋಟಿ ರೂ. ಹಣ ಇರುವ ಪೆಟ್ಟಿಗೆಯನ್ನು ಶಿವಮೊಗ್ಗ ರೈಲ್ವೆ ನಿಲ್ದಾಣದ ಹೊರಭಾಗದಲ್ಲಿ ಇರಿಸಿರುವುದಾಗಿ ಗಿರೀಶ್ ಹಾಗೂ ರಾಜೇಶ್ ಇಬ್ಬರಿಗೂ ತಿಳಿಸಿದ್ದರು. ಅವರಿಬ್ಬರೂ ಬಾರದ ಕಾರಣ ಪೆಟ್ಟಿಗೆಗಳು ಹಾಗೇ ಉಳಿದಿದ್ದವು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!