ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಲಾಕ್‌ಡೌನ್ ಇದ್ದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನಗತ್ಯ ಸಂಚಾರಕ್ಕೆ ಬೀಳದ ಬ್ರೇಕ್!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………

ಹೊಸದಿಗಂತ ವರದಿ,ಮಂಗಳೂರು:

ಕೊರೋನಾ ಮಿತಿ ಮೀರಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್‌ಡೌನ್ ಹೇರಲಾಗಿದೆ. ಆರಂಭದಲ್ಲಿ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದ್ದ ಲಾಕ್‌ಡೌನ್ ನಿಯಮಗಳು ಬರಬರುತ್ತಾ ಸಡಿಲಗೊಳ್ಳುತ್ತಾ ಬರುತ್ತಿರುವುದು ಜನತೆಯ ಆತಂಕಕ್ಕೆ ಕಾರಣವಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಪ್ರತಿದಿನ 800-900ರ ಆಸುಪಾಸಿನಲ್ಲಿ ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ ಒಂದು ತಿಂಗಳಿನಿಂದ ಇದೇ ಸರಾಸರಿ ಮುಂದುವರಿಯುತ್ತಿದೆ. ಜಿಲ್ಲೆಯಲ್ಲಿ ಆರಂಭದಲ್ಲಿ ಕಠಿಣವಾಗಿ ಪಾಲನೆಯಾದ ಲಾಕ್‌ಡೌನ್ ನಿಯಮಗಳು ಬರಬರುತ್ತಾ ಸಡಿಲಗೊಳ್ಳುತ್ತಿರುವುದು ಪಾಸಿಟಿವ್ ಪ್ರಕರಣಗಳ ಮೇಲೂ ಪರಿಣಾಮ ಬೀರಿದೆ. ಲಾಕ್ ಡೌನ್ ನಿಯಮ ಉಲ್ಲಂಘಿಸಿ ಜನತೆ ಓಡಾಡುವುದು, ಬೇಕಾಬಿಟ್ಟಿ ವಾಹನಗಳ ಓಡಾಟ ಹೆಚ್ಚುತ್ತಲೇ ಇದೆ. ಈ ರೀತಿಯ ನಿರ್ಲಕ್ಷ್ಯ ಜಿಲ್ಲೆ ಕೊರೋನಾ ಲಾಕ್‌ಡೌನ್‌ನಿಂದ ಮುಕ್ತವಾಗುವುದಕ್ಕೂ ಅಡ್ಡಿಯಾಗಬಹುದು. ಆದ್ದರಿಂದ ಪೊಲೀಸರು ಮತ್ತಷ್ಟು ಅಲರ್ಟ್ ಆಗುವುದರೊಂದಿಗೆ ವಿನಾ ಕಾರಣ ಓಡಾಡುವ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕಿದೆ.
10 ಗಂಟೆಯ ಬಳಿಕವೂ ಓಡಾಟ!
ದಿನ ಬಳಕೆಯ ವಸ್ತುಗಳನ್ನು ಕೊಂಡುಕೊಳ್ಳಲು ಬೆಳಗ್ಗೆ 10 ಗಂಟೆಯವರೆಗೆ ಮಾತ್ರ ಅವಕಾಶವಿದೆ. ಆದರೆ ಆ ಬಳಿಕವೂ ಜನತೆಯ ಓಡಾಟ ಮುಂದುವರಿಯುತ್ತದೆ. ಕೆಲವೊಂದು ಅಂಗಡಿಗಳು 10 ಗಂಟೆ ಕಳೆದರೂ ಮುಚ್ಚುವುದೂ ಇಲ್ಲ. ಜನತೆ ಕೂಡ ಖರೀದಿಯನ್ನು ಮುಗಿಸುವುದಿಲ್ಲ!
ಮಂಗಳೂರು ನಗರದಲ್ಲಂತೂ ಬೆಳಗ್ಗಿನಿಂದಲೇ ವ್ಯಾಪಾರ ವಹಿವಾಟು ಜೋರಾಗಿರುತ್ತದೆ. ಸಾಮಾಜಿಕ ಅಂತರ ಮರೆತು ಖರೀದಿಗೆ ಮುಗಿ ಬೀಳುವುದು ನಿತ್ಯ ಮುಂದುವರಿಯುತ್ತಿದೆ. ಉರ್ವ ಮಾರ್ಕೆಟ್, ಬಂಟ್ಸ್ ಹಾಸ್ಟೆಲ್ ಮಾರುಕಟ್ಟೆ, ಸ್ಟೇಟ್ ಬ್ಯಾಂಕ್, ಕಾರ್‌ಸ್ಟ್ರೀಟ್, ಕಂಕನಾಡಿ ಹೀಗೆ ನಗರದ ಬಹುತೇಕ ಕಡೆಗಳಲ್ಲಿ ಬೆಳಗ್ಗಿನ ವೇಳೆ ಖರೀದಿಗೆ ನೂಕು ನುಗ್ಗಲು ಉಂಟಾಗಿಬಿಡುತ್ತದೆ. ಸಾಮಾಜಿಕ ಅಂತರ ಮರೆತರೂ ಅಲ್ಲಿ ಕೇಳುವವರಿರುವುದಿಲ್ಲ.
ಕಳೆಗುಂದಿದ ಚೆಕ್‌ಪೋಸ್ಟ್‌ಗಳು!
ಅನಗತ್ಯ ವಾಹನಗಳ ಓಡಾಟಕ್ಕೆ ಕಡಿವಾಣ ಹಾಕುವ ನೆಲೆಯಲ್ಲಿ ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಆದರೆ ಸದ್ಯ ಈ ಚೆಕ್ ಪೋಸ್ಟ್‌ಗಳು ಕಳೆಗುಂದಿವೆ. ಇದರಿಂದಾಗಿ ವಾಹನಗಳ ಓಡಾಟ ನಿರಾತಂಕವಾಗಿ ಮುಂದು ವರಿಯುತ್ತಿದೆ. ಕೆಲವೆಡೆ ಪೊಲೀಸರಿದ್ದರೂ ವಾಹನಗಳನ್ನು ತಡೆದು ವಿಚಾರಿಸುವ ಗೋಜಿಗೆ ಹೋಗುವುದಿಲ್ಲ. ಇದರಿಂದಾಗಿ ವಿನಾ ಕಾರಣ ಓಡಾಡುವವರ ಸಂಖ್ಯೆ ಹೆಚ್ಚಾಗತೊಡಗಿದೆ.
ವಾಕಿಂಗ್ ನೆಪದಲ್ಲಿ ರಸ್ತೆಗೆ ಬರುವ ಜನ
ಇನ್ನು ನಗರ ವ್ಯಾಪ್ತಿಯಲ್ಲಿ ಸಂಜೆಯಾಗುತ್ತಲೇ ವಾಕಿಂಗ್ ನೆಪದಲ್ಲಿ ಜನತೆ ರಸ್ತೆಗಿಳಿಯುತ್ತಿದ್ದಾರೆ. ತಮ್ಮ ತಮ್ಮ ವ್ಯಾಪ್ತಿಯಲ್ಲಿ ವಾಕಿಂಗ್ ನಡೆಸುವುದನ್ನು ಬಿಟ್ಟು ಮುಖ್ಯ ರಸ್ತೆಗಳಲ್ಲಿ ಓಡಾಟಕ್ಕಿಳಿಯುತ್ತಿದ್ದಾರೆ. ಈ ರೀತಿಯ ನಿರ್ಲಕ್ಷ್ಯವೂ ಕೊರೋನಾ ಇಳಿಮುಖವಾಗುವಲ್ಲಿ ತೊಡಕಾಗಿದೆ. ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಕಡಿಮೆಯಾಗುವಲ್ಲಿ ಲಾಕ್ ಡೌನ್ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗಬೇಕಿದೆ ಎಂಬ ಮಾತುಗಳನ್ನು ನಗರದ ಪ್ರಜ್ಞಾವಂತ ನಾಗರಿಕರಿಂದ ಕೇಳಿಬರುತ್ತಿದೆ.
ನಿಯಮ ಉಲ್ಲಂಘನೆಯಿಂದ ಅಪಘಾತ ಹೆಚ್ಚಳ!
ನಗರದಲ್ಲಿ ನಿಯಮ ಉಲ್ಲಂಘಿಸಿ ಓಡಾಡುವ ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ಲಾಕ್‌ಡೌನ್ ವೇಳೆ ಅತಿಯಾದ ವೇಗದಲ್ಲಿ ಓಡಾಡುವ ವಾಹನಗಳು ಅಮಾಯಕರ ಪ್ರಾಣಕ್ಕೂ ಕುತ್ತು ತರುತ್ತಿವೆ. ಇದಕ್ಕೆ ಇತ್ತೀಚೆಗೆ ನಗರದಲ್ಲಿ ನಡೆದ ಅಪಘಾತ ಪ್ರಕರಣಗಳೇ ಸಾಕ್ಷಿ.
ಇತ್ತೀಚೆಗೆ ಪದವಿನಂಗಡಿಯಲ್ಲಿ ಬೈಕ್ ಅಪಘಾತವಾಗಿ ಯುವಕ ಸಾವನ್ನಪ್ಪಿರುವುದು, ಉಳ್ಳಾಲ ಸೇತುವ ಬಳಿ ವಿರುದ್ಧ ದಿಕ್ಕಿನಲ್ಲಿ ಬಂದ ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರೆ ಕುಂಪಲದ ವಸಂತಿ ನಾಯರ್ ಮೃತಪಟ್ಟಿರುವುದು, ಪಂಪ್‌ಲೆವ್ ಮೇಲ್ಸೇತುವೆಯಲ್ಲಿ ಕಾರೊಂದು ಚಾಲಕ ನಿಯಂತ್ರಣ ತಪ್ಪಿ ಸ್ಕೂಟರ್‌ಗೆ ಡಿಕ್ಕಿಯಾಗಿ ಬಂಟ್ವಳ ಕಳ್ಳಿಗೆಯ ಛಾಯಾಗ್ರಾಹಕ ದಯಾನಂದ ಎಂಬವರು ಗಂಭೀರ ಗಾಯಗೊಂಡಿರುವುದು ಹೀಗೆ ಲಾಕ್ ಡೌನ್ ವೇಳೆಯಲ್ಲಿಯೂ ಹತ್ತಾರು ಅಪಘಾತಗಳು ಸಂಭವಿಸಿ ಪ್ರಾಣಹಾನಿಯನ್ನುಂಟು ಮಾಡಿವೆ. ಈ ಎಲ್ಲಾ ಪ್ರಕರಣಗಳಲ್ಲೂ ನಿರ್ಲಕ್ಷ್ಯದ ಚಾಲನೆ ಎದ್ದು ಕಾಣುತ್ತದೆ.
ವಿರುದ್ಧ ದಿಕ್ಕಿನಲ್ಲಿ ಬರುವ ವಾಹನಗಳು!
ನಗರದ ಕೆಲವೆಡೆ ರಸ್ತೆ ಕಾಮಗಾರಿಯ ಹಿನ್ನೆಲೆಯಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಇತರ ರಸ್ತೆಗಳಲ್ಲೂ ವಾಹನಗಳು ಸಂಚಾರ ನಿಯಮ ಮೀರಿ ಅಡ್ಡಾ ದಿಡ್ಡಿಯಾಗಿ ಓಡಾಡುವುದು ಹೆಚ್ಚಾಗಿ ಕಂಡುಬರುತ್ತಿದೆ. ಹೆಚ್ಚಾಗಿ ಝೊಮೆಟೋ, ಸ್ವಿಗ್ಗಿ ಸಂಸ್ಥೆಗಳ ಬೈಕ್ ಸವಾರರು ಹೆಚ್ಚಿನ ಕಡೆಗಳಲ್ಲಿ ನಿಯಮ ಉಲ್ಲಂಘಿಸಿ ಓಡಾಡುವುದು ಕಂಡುಬರುತ್ತಿದೆ. ನಗರದ ಪಬ್ಬಾಸ್ ಮುಂಭಾಗಂವತೂ ಈ ಚಿತ್ರಣ ನಿತ್ಯ ಕಂಡುಬರುತ್ತಿದೆ. ರಾತ್ರಿ ವೇಳೆ ಇಲ್ಲಿ ತಿರುವಿನಲ್ಲಿ ಅತಿವೇಗವಾಗಿ ವಿರುದ್ಧ ದಿಕ್ಕಿನಲ್ಲಿ ಬರುವ ಬೈಕ್‌ಗಳು ಎಂಜಿ ರಸ್ತೆಯ ಕಡೆಗಳಿಂದ ಹೋಗುವ ವಾಹನ ಸವಾರರನ್ನು ಗೊಂದಲಕ್ಕೀಡು ಮಾಡುತ್ತಿವೆ. ನಗರದ ಬಹುತೇಕ ಕಡೆಗಳಲ್ಲಿ ಇದೇ ಚಿತ್ರಣ ಕಂಡುಬರುತ್ತಿದೆ. ನಿಯಮ ಉಲ್ಲಂಘಿಸಿ ವಿರುದ್ಧ ದಿಕ್ಕಿನಲ್ಲಿ ಬರುವ ವಾಹನಗಳ ಮೇಲೆ ಕ್ರಮವಾಗಬೇಕು ಎಂಬ ಆಗ್ರಹವೂ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss