ಕೊಡಗಿನಲ್ಲಿ ಪೊಲೀಸ್ ವ್ಯವಸ್ಥೆ ಹದಗೆಟ್ಟಿದೆ-ಭ್ರಷ್ಟಾಚಾರ ಮಿತಿ ಮೀರಿದೆ : ಬ್ರಿಜೇಶ್ ಕಾಳಪ್ಪ ಟೀಕೆ

ಹೊಸದಿಗಂತ ವರದಿ, ಕೊಡಗು:

ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ದರೋಡೆ ಮತ್ತು ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ಜಿಲ್ಲೆಯ ಶಾಸಕದ್ವಯರ ನಿರ್ಲಕ್ಷ್ಯವೇ ಕಾರಣ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಇತ್ತೀಚಿನ ದಿನಗಳಲ್ಲಿ ಒಂಟಿ ಮಹಿಳೆಯರು, ವಯೋವೃದ್ಧರು ಮನೆಯಲ್ಲಿರುವುದೇ ಕಷ್ಟವಾಗಿದೆ. ದರೋಡೆಕೋರರು ಮನೆಗೆ ನುಗ್ಗುತ್ತಾರೆ ಎನ್ನುವ ಜೀವಭಯ ಕಾಡುತ್ತಿದೆ. ನಿರಂತರವಾಗಿ ದರೋಡೆಗಳು ನಡೆಯುತ್ತಿದ್ದರೂ ಇದನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯನ್ನು ಕಾರ್ಯೋನ್ಮುಖವಾಗುವಂತೆ ಪ್ರೇರೆಪಿಸುವಲ್ಲಿ ಶಾಸಕರು ವಿಫಲರಾಗುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಕೆಲವು ದಿನಗಳ ಹಿಂದೆ ನಾಪೋಕ್ಲುವಿನ ಕೋಳಕೇರಿ ಭಾಗದಲ್ಲಿ ನಿವೃತ್ತ ನ್ಯಾಯಾಧೀಶರೊಬ್ಬರ ಸಹೋದರಿಯರ ಮನೆಗೆ ದರೋಡೆ ಕೋರರು ನುಗ್ಗಿ ಜೀವಭಯ ಮೂಡಿಸಿ ನಗದು ಮತ್ತು ಚಿನ್ನಾಭರಣಗಳನ್ನು ದೋಚಿದ್ದಾರೆ. ಒಬ್ಬ ನಿವೃತ್ತ ನ್ಯಾಯಾಧೀಶರ ಸಹೋದರಿಯರ ಮನೆಗೆ ಈ ಗತಿಯಾದರೆ ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿರುವ ಬ್ರಿಜೇಶ್ ಕಾಳಪ್ಪ, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೆ ಶ್ರೀಮಂಗಲ ಸಮೀಪದ ನಾಲ್ಕೇರಿಯಲ್ಲಿ ವಯೋವೃದ್ಧ ದಂಪತಿಗಳಿದ್ದ ಮನೆಗೆ ನುಗ್ಗಿದ ಚೋರ ಚಾಕು ತೋರಿಸಿ ಜೀವಭಯ ಹುಟ್ಟಿಸಿದ್ದಾನೆ. ಮತ್ತೊಂದು ಪ್ರಕರಣದಲ್ಲಿ ಕೈಕೇರಿಯಲ್ಲಿ ತಾಯಿ ಮಗಳು ಇದ್ದ ಮನೆಗೆ ನುಗ್ಗಲು ವ್ಯಕ್ತಿಯೊಬ್ಬ ಪ್ರಯತ್ನಿಸಿದ್ದಾನೆ. ಕಾರ್ಮಿಕರ ಸೋಗಿನಲ್ಲಿ ಬೆಳೆಗಾರರ ಮನೆಗಳಿಗೆ ಬರುತ್ತಿರುವ ಕೆಲವು ಅಪರಿಚಿತ ವ್ಯಕ್ತಿಗಳು ಸಾವಿರಾರು ರೂಪಾಯಿ ಸಾಲ ಪಡೆದು ಪರಾರಿಯಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಬ್ರಿಜೇಶ್ ದೂರಿದ್ದಾರೆ.
ಮೇಜರ್ ಸರ್ಜರಿ ಅಗತ್ಯ: ಕಳೆದ ವರ್ಷ ವಿರಾಜಪೇಟೆಯಲ್ಲಿ ಪೊಲೀಸರ ಹಲ್ಲೆಯಿಂದ ರಾಯ್ ಡಿಸೋಜ ಎಂಬವರು ಮೃತಪಟ್ಟಿದ್ದರು. ಬೊಯಿಕೇರಿಯಲ್ಲಿ ನಡೆದ ಕಾರುಗಳ ನಡುವಿನ ಅಪಘಾತ ಪ್ರಕರಣ ಕೋಮು ದ್ವೇಷಕ್ಕೆ ತಿರುಗಿ ಅಶಾಂತಿಗೆ ಕಾರಣವಾಗಿತ್ತು. ಇದೆಲ್ಲವೂ ಪೊಲೀಸ್ ಇಲಾಖೆಯ ವೈಫಲ್ಯದಿಂದಲೇ ಆಗಿದೆ ಎಂದು ಆರೋಪಿಸಿರುವ ಬ್ರಿಜೇಶ್ ಕಾಳಪ್ಪ, ಕೊಡಗು ಪೊಲೀಸ್’ಗೆ ಮೇಜರ್ ಸರ್ಜರಿ ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಗೃಹ ಇಲಾಖೆ ಪೊಲೀಸ್ ಇಲಾಖೆಗೆ ಸಾಕಷ್ಟು ವಾಹನಗಳನ್ನು ನೀಡಿದ್ದರೂ ಪೊಲೀಸರು ಗಸ್ತು ತಿರುಗದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಜಿಲ್ಲೆಯ ಶಾಸಕರುಗಳಿಗೆ ಪೊಲೀಸರ ಮೇಲೆ ಹಿಡಿತ ಇಲ್ಲದಾಗಿದೆ. ಜಿಲ್ಲೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಶೇಕಡವಾರು ಕಮಿಷನ್ ಇಲ್ಲದೆ ಯಾವುದೇ ಕಡತಗಳು ವಿಲೇವಾರಿಯಾಗುತ್ತಿಲ್ಲ. ವರ್ಗಾವಣೆ ದಂಧೆಗೆ ಕಡಿವಾಣ ಇಲ್ಲದಾಗಿದೆ. ಕಂದಾಯ ಇಲಾಖೆಯಲ್ಲಿ ಜಮೀನುಗಳಿಗೆ ಸಂಬಂಧಿಸಿದ ಅರ್ಜಿಗಳು ಹಣ ನೀಡದೆ ವಿಲೇವಾರಿಯಾಗುತ್ತಿಲ್ಲವೆಂದು ಆರೋಪಿಸಿದ್ದಾರೆ.
ದೇಶದ ಪ್ರಧಾನಮಂತ್ರಿಗಳು “ನಾ ಕಾವುಂಗ, ನಾ ಕಾನೆ ದೂಂಗ’ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಬಿಜೆಪಿ ಪಕ್ಷದ ಪ್ರತಿನಿಧಿಗಳೇ ಇರುವ ಕೊಡಗಿನಲ್ಲಿ ಏನಾಗುತ್ತಿದೆ ಎಂದು ಬ್ರಿಜೇಶ್ ಕಾಳಪ್ಪ ಪ್ರಶ್ನಿಸಿದ್ದಾರೆ.
ಸರ್ದಾರ್ ಪಟೇಲ್ ಅವರ ಕಾಲದಲ್ಲಿ ಮನೆಗೆ ಬಾಗಿಲು ಹಾಕದಿದ್ದರೂ ವಸ್ತುಗಳು ಸುರಕ್ಷವಾಗಿರುತ್ತಿದ್ದವು. ಆದರೆ ಈಗ ರಾಮರಾಜ್ಯದ ಮಾತುಗಳನ್ನು ಆಡುತ್ತಿರುವವರ ಆಡಳಿತ ವ್ಯವಸ್ಥೆಯಲ್ಲಿ ಹಗಲು ದರೋಡೆ ನಡೆಯುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಜಿಲ್ಲೆಯ ವಿವಿಧ ಕಚೇರಿಗಳು ಭ್ರಷ್ಟಾಚಾರ ಮುಕ್ತಗೊಳ್ಳದಿದ್ದಲ್ಲಿ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!