90 ನೇ ಈ ವಯಸ್ಸಿನಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು ಕಣ್ಣುಮುಚ್ಚಬೇಕು: ಎಚ್​.ಡಿ.ದೇವೇಗೌಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯ ಚುನಾವಣೆಯಲ್ಲಿ ಬಿರುಸಿನ ಪ್ರಚಾರ ನಡೆಯುತ್ತಿದ್ದು, ಇಲ್ಲಿ ಗೆಲುವಿಗಾಗಿ ಜನರ ಸೆಳೆಯಲು ರಣತಂತ್ರಗಳನ್ನು ರೂಪಿಸುತ್ತಿದ್ದಾರೆ.

ಜೆಡಿಎಸ್ ಪರ ಪ್ರಚಾರದಲ್ಲಿರುವ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಆಗಾಗ ಭಾವುಕಗೊಳಿಸುವ ಮಾತುಗಳನ್ನೇ ಮತಯಾಚನೆಯ ಅಸ್ತ್ರವಾಗಿ ಪ್ರಯೋಗಿಸುತ್ತಿದ್ದಾರೆ.

ಇಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೂಡ ಮತ್ತೊಮ್ಮೆ ಅಂಥದ್ದೇ ಮಾತನ್ನಾಡಿದ್ದಾರೆ.
ಈ ವಯಸ್ಸಲ್ಲೂ ಹುರುಪಿನಿಂದ ಪ್ರಚಾರದಲ್ಲಿ ತೊಡಗಿಕೊಂಡಿರುವ ದೇವೇಗೌಡರು, ಇಂದು ಚನ್ನಪಟ್ಟಣದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್​ ಬಹಿರಂಗ ಸಭೆಯಲ್ಲಿ ಕುಮಾರಸ್ವಾಮಿ ಇಷ್ಟು ಕೆಲಸ ಮಾಡಿದ್ದರೂ ನಾನು ಬಂದು ಓಟ್ ಕೇಳಬೇಕು. 90 ವರ್ಷದ ಈ ವಯಸ್ಸಿನಲ್ಲಿ ಒಂದು ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತಂದು ಕಣ್ಣು ಮುಚ್ಚಬೇಕು ಎಂದು ಅವರು ಹೇಳಿದರು.

ಹಿಂದೂಸ್ತಾನದಲ್ಲಿ ರೈತರ ಸಾಲಮನ್ನಾ ಮಾಡಿದ ಏಕೈಕ ಸಿಎಂ ಕುಮಾರಸ್ವಾಮಿ. ಬಿಸಿಲ ಬೇಗೆಯಲ್ಲಿ ಕೆಲಸ ಮಾಡುವ ರೈತರಿಗೆ 5 ಸಾವಿರ ಮಾಸಾಶನ ಕೊಡಲು ಅವರು ನಿರ್ಧರಿಸಿದ್ದಾರೆ. ಕಾಶ್ಮೀರಕ್ಕೆ 10 ವರ್ಷ ಯಾವ ಪ್ರಧಾನಿಯೂ ಹೋಗಿರಲಿಲ್ಲ. ನಾನು ಆವಾಗ ಕಾಶ್ಮೀರಕ್ಕೆ ಹೋಗಿದ್ದೆ. ಹೋದರೆ ಹೊಡೆದು ಹಾಕುತ್ತಾರೆ ಎನ್ನುವ ಭಯವಿತ್ತು. ನಾನು ಸತ್ತರೆ ಹೊಳೆನರಸೀಪುರದಲ್ಲಿ ಮಣ್ಣು ಮಾಡುವಂತೆ ಹೇಳಿ ಹೋಗಿದ್ದೆ. ನಾಲ್ಕು ಬಾರಿ ಕಾಶ್ಮೀರಕ್ಕೆ ಹೋಗಿ ಅಲ್ಲಿ ಶಾಂತಿ ತಂದಿದ್ದೆ. ಮುಸ್ಲಿಂ ಬಾಂಧವರು ಇದನ್ನ ಅರ್ಥ ಮಾಡಿಕೊಳ್ಳಬೇಕು. ಮುಸ್ಲಿಂ ಸಮುದಾಯಕ್ಕೆ ರಿಜರ್ವೆಷನ್ ಕೊಟ್ಟಿದ್ದು ನಾವು ಎಂದೂ ದೇವೇಗೌಡರು ಹೇಳಿದರು.

ನಿಮ್ಮ ಹಳ್ಳಿಯ ರೈತನ ಮಗ ನಾನು ಬಂದು ನಿಮ್ಮ ಕಷ್ಟ ಆಲಿಸಿದ್ದೇನೆ. ಬಿಜೆಪಿಯ ಬಣ್ಣದ ಮಾತಿಗೆ ಮರುಳಾಗಬೇಡಿ. ಮಂಡ್ಯದಲ್ಲಿ ನಿಲ್ಲಲು ಕುಮಾರಸ್ವಾಮಿಗೆ ಹೇಳಿದ್ದರೂ ಅವರು ಅಲ್ಲಿ ನಿಲ್ಲಲಿಲ್ಲ. ಇದು ಅವರ ಕರ್ಮಭೂಮಿ, ಹಾಗಾಗಿ ಇಲ್ಲೇ ಸ್ಪರ್ಧೆ ಮಾಡಿದ್ದಾರೆ. ಇದೇ 10ನೇ ತಾರೀಕು ನೀವು ಕುಮಾರಣ್ಣನ ಮರೆಯಬಾರದು. ಯಾರು ಎಷ್ಟೇ ದುಡ್ಡು ಕೊಟ್ಟು ಅಪಪ್ರಚಾರ ಮಾಡಬಹುದು, ಯಾರೂ ತಲೆಕೆಡಿಸಿಕೊಳ್ಳಬೇಡಿ. ಕುಮಾರಸ್ವಾಮಿ ಅವರನ್ನ ಗೆಲ್ಲಿಸಲು ನೀವೆಲ್ಲ ಪಣತೊಡಿ ಎಂದು ಮಾಜಿ ಪ್ರಧಾನಿ ಕರೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!