ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………
ಹೊಸ ದಿಗಂತ ವರದಿ, ಯಾದಗಿರಿ:
ಕಳೆದ 40 ವರ್ಷಗಳಿಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಜನಪರ ಹೋರಾಟದ ಮೂಲಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ಅವರು ಎಲ್ಲಾ ವರ್ಗದ ಜನರಿಗೆ ಜನಪರ ಯೋಜನೆಗಳನ್ನು ನೀಡಿದ್ದಾರೆ., ಎಲ್ಲಾ ಜಾತಿಯ ಜನರ ಪ್ರೀತಿ ವಿಶ್ವಾಸ ಅವರ ಮೇಲಿದೆ. ಕಾರಣ ಸೇವೆ, ಅನುಭವ, ಆಡಳಿತ ರಾಜ್ಯಕ್ಕೆ ಅವಶ್ಯಕವಿದೆ. ಈ ನಿಟ್ಟಿನಲ್ಲಿ ಬಿಜೆಪಿ ಹೈ ಕಮಾಂಡ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಅಬ್ಬೆತುಮಕೂರಿನ ಸಿದ್ಧ ಸಂಸ್ಥಾನ ಮಠದ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮೀಜಿ ವ್ಯಕ್ತಪಡಿಸಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲೆಯ ವೀರಶೈವ ಮಠಾಧೀಪತಿಗಳ ಒಕ್ಕೂಟ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಸರಳ ವ್ಯಕ್ತಿತ್ವದ ಜೊತೆಗೆ ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ಹರಿಸುವಂತ ವ್ಯಕ್ತಿ. ಉತ್ತಮವಾಗಿ, ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಅವರ ಅಧಿಕಾರ 2 ವರ್ಷವಿದೆ. ನಾಯಕರು ಸಕರಾತ್ಮಕ ಚಿಂತನೆ ಮಾಡಿ ಮುಂದುವರೆಸಿದರೆ ರಾಜ್ಯಕ್ಕೆ ಒಳಿತಾಗಬಹುದು ಎಂದು ನುಡಿದರು.
ಗುರುಮಿಠಕಲ್ ಮಠದ ಖಾಸಾ ಮಠದ ಪೀಠಾಧೀಪತಿ ಶಾಂತವೀರ ಮಹಾ ಸ್ವಾಮೀಜಿ ಮಾತನಾಡಿ, ಬಿ.ಎಸ್ ಯಡಿಯೂರಪ್ಪನವರು ವೀರಶೈವ ಸಮಾಜದ ಹಿರಿಯ ನಾಯಕರಲ್ಲದೇ, ರಾಜ್ಯದ ಎಲ್ಲಾ ಸಮಾಜದ ಜನರನ್ನು ಒಟ್ಟಿಗೆ ತೆಗೆದುಕೊಳ್ಳುವ ಜೊತೆಗೆ ಪ್ರಗತಿಗೆ ಪೂರಕ ಆಡಳಿತ ನೀಡಿದ್ದಾರೆ. ಪರಿಣಾಮ ಬಿಜೆಪಿ ಹೈ ಕಮಾಂಡ್ ರಾಜ್ಯದ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಬದಲಾವಣೆ ಪ್ರಕ್ರೀಯೆ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ನಾವು ಮಠಾಧೀಶರು ನಮ್ಮ ಮಠಗಳಿಗೆ ಎಲ್ಲಾ ವರ್ಗದ ಜನರು ಬರುತ್ತಾರೆ. ಅಲ್ಲದೇ ಎಲ್ಲಾ ಪಕ್ಷಗಳ ಉನ್ನತ ರಾಜಕಾರಣಿಗಳು ಕೂಡ ಬರುತ್ತಾರೆ, ಅವರಿಗೆ ಒಂದೇ ದೃಷ್ಠಿಯಿಂದ ಆಶೀರ್ವಾದ ಮಾಡಿ, ಗೌರವ, ದಾಸೋಹ ಮಾಡುವ ಮೂಲಕ ಒಳ್ಳೆಯದಾಗಲಿ ಎಂದು ಹಾರೈಸುತ್ತೇವೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ನೇರಡಗುಂಬದ ಪಂಚಮಸಿದ್ದಲಿoಗ ಸ್ವಾಮೀಜಿ, ಹೆಡಗಿಮದ್ರಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶಹಾಪೂರದ ಪಕೀರೇಶ್ವರ ಮಠದ ಪೀಠಾಧಿಪತಿ ಗುರುಪಾದಯ್ಯ ಸ್ವಾಮೀಜಿ, ದಾಸಬಾಳ ಮಠದ ಶ್ರೀ ವೀರೇಶ್ವರ ಸ್ವಾಮೀಜಿ, ಕಡೇಚೂರಿನ ಗುರುಮೂರ್ತಿ ಶಿವಾಚಾರ್ಯರು, ಕೆಂಬಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯರು ಸೇರಿದಂತೆ ಇತರರು ಇದ್ದರು.