ಕಾನ್ಪುರ ಅಭಿವೃದ್ಧಿ ಪ್ರಾಧಿಕಾರದಿಂದ ಬುಲ್ಡೋಜರ್‌ ಪ್ರಯೋಗ: ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ್ದ ಅತಿಥಿಗೃಹ ಧ್ವಂಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಲಾಗಿದ್ದ ಅತಿಥಿಗೃಹವನ್ನು ಬುಲ್ಡೋಜರ್‌ ಪ್ರಯೋಗಿಸುವ ಮೂಲಕ ಕಾನ್ಪುರ ಅಭಿವೃದ್ಧಿ ಪ್ರಾಧಿಕಾರವು (ಕೆಡಿಎ) ನೆಲಸಮಗೊಳಿಸಿದೆ. ಈ ಅತಿಥಿಗೃಹವು ಪ್ರಗತಿಶೀಲ ಸಮಾಜವಾದಿ ಪಕ್ಷದ ನಾಯಕ ವಿನೋದ್ ಪ್ರಜಾಪತಿ ಅವರಿಗೆ ಸೇರಿತ್ತು ಎನ್ನಲಾಗಿದೆ.

ಮೂಲಗಳ ವರದಿಯ ಪ್ರಕಾರ ಹೆದ್ದಾರಿ ಬದಿಯ ಅಭಿವೃದ್ಧಿ ಪ್ರಾಧಿಕಾರದ ಜಾಗವನ್ನು ಒತ್ತುವರಿ ಮಾಡಿಕೊಂಡು ಪಿಎಸ್‌ಪಿ ಮುಖಂಡ ಅಕ್ರಮ ಅತಿಥಿ ಗೃಹ ನಿರ್ಮಿಸಿದ್ದರು. ವಿಶೇಷ ಅಧಿಕಾರಿ ಸತ್ಯಂ ಶುಕ್ಲಾ ಮಾತನಾಡಿ, ಪಕ್ಷದ ಮುಖಂಡರು ನಕಲಿ ದಾಖಲೆ ಸೃಷ್ಟಿಸಿ ದಿವ್ಯಾಂಶಿ ಗಾರ್ಡನ್ ಹೆಸರಿನ ಅತಿಥಿ ಗೃಹವನ್ನು ನಡೆಸುತ್ತಿದ್ದರು. ಈ ವಿಷಯವಾಗಿ ಪ್ರಾಧಿಕಾರವು ಅವರಿಗೆ ಹಲವು ಬಾರಿ ನೋಟಿಸ್‌ಗಳನ್ನು ಕಳುಹಿಸಿದ್ದರೂ ಪಕ್ಷದ ಮುಖಂಡರು ಯಾವುದೇ ಗಮನ ಹರಿಸಿಲ್ಲ. ಬುಧವಾರ ಬೆಳಗ್ಗೆ ಕೆಡಿಎ ಅಧಿಕಾರಿಗಳು, ಪೊಲೀಸರು ಹಾಗೂ ಇತರೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ವಿಲೇವಾರಿ ಕಾರ್ಯ ನಡೆಸಿದರು ಎಂದಿದ್ದಾರೆ.

2000 ಚದರ ಮೀಟರ್ ಜಾಗದಲ್ಲಿ ನಿರ್ಮಿಸಲಾಗಿದ್ದ ಸಂಪೂರ್ಣ ಅತಿಥಿ ಗೃಹವನ್ನು ನಾಲ್ಕು ಬುಲ್ಡೋಜರ್ ಬಳಸಿ ಕೆಡವಲಾಗಿದೆ. ಎರಡು ವರ್ಷಗಳ ಹಿಂದೆ ರಾಜಕೀಯ ಮುಖಂಡನ ವಿರುದ್ಧ ಪ್ರಕರಣ ದಾಖಲಿಸಿ ಅತಿಥಿ ಗೃಹಕ್ಕೆ ಸೀಲ್ ಹಾಕಲಾಗಿತ್ತು. ಆದರೆ ಪ್ರಜಾಪತಿ ಅವರು ಸೀಲ್ ಮುರಿದು ಅತಿಥಿ ಗೃಹದಲ್ಲಿ ಸೇವೆಗಳನ್ನು ಪುನರಾರಂಭಿಸಿದ್ದರು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!