ಹೊಸ ದಿಗಂತ ವರದಿ, ಚಿತ್ರದುರ್ಗ:
ಗೂಳಿ ಕಾಳಗದ ನಡುವೆ ಕಾಂಗ್ರೆಸ್ ಪಕ್ಷ ನಲುಗುತ್ತಿದ್ದು, ಕಾರ್ಯಕರ್ತರು ಗೊಂದಲದಲ್ಲಿ ಸಿಲುಕಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ನೇತೃತ್ವದಲ್ಲಿ ಹೊಳಲ್ಕೆರೆ ತಾಲ್ಲೂಕಿನ ದೊಡ್ಡೊಟ್ಟೆ ರಂಗನಾಥಸ್ವಾಮಿ ಬೆಟ್ಟದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಕನಕಪುರ ಗೂಳಿ ಹಾಗೂ ಮೈಸೂರಿನ ಗೂಳಿ ನಾಯಕತ್ವಕ್ಕಾಗಿ ಪರಸ್ಪರ ಹೋರಾಟ ನಡೆಸುತ್ತಿವೆ. ಇದರಿಂದ ಕಾರ್ಯಕರ್ತರು ನಲುಗುತ್ತಿದ್ದಾರೆ ಎಂದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಕಾಂಗ್ರೆಸ್ನವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ. ದೊಡ್ಡವರನ್ನು ಬಯ್ಯುವುದರಿಂದ ತಾವೂ ದೊಡ್ಡವರಾಗಬಹುದು ಎಂಬ ಭ್ರಮೆ ಕಾಂಗ್ರೆಸ್ನವರದ್ದು. ಇದರಿಂದಾಗಿ ಕಾಂಗ್ರೆಸ್ನ ಸ್ಥಿತಿ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ ಎಂದು ಲೇವಡಿ ಮಾಡಿದರು.
ಬಿಜೆಪಿ ಪಕ್ಷ ಸ್ವಂತ ಬಲದ ಮೇಲೆ ವಿಧಾನ ಪರಿಷತ್ ಚುನಾವಣೆ ಎದುರಿಸುತ್ತಿದೆ. 20 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕೆಲವು ಕ್ಷೇತ್ರಗಳಲ್ಲಿ ಬೇರೆ ಪಕ್ಷದವರು ಸಹ ಸ್ವಯಂ ಪ್ರೇರಣೆಯಿಂದ ಬೆಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಕನಿಷ್ಠ 15 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಾಮುಂಡಿ ಕ್ಷೇತ್ರದಲ್ಲಿ ನಂಬಿಕೆ ಕಳೆದುಕೊಂಡ ಸಿದ್ದರಾಮಯ್ಯ ಬಾದಾಮಿಗೆ ಬಂದು ಸ್ಪರ್ಧಿಸಿದರು. ಶೋಷಿತ ಸಮುದಾಯಗಳ ಹೆಸರಿನಲ್ಲಿ ರಾಜಕೀಯ ಮಾಡುವ ಇವರು ಅವರ ನಂಬಿಕೆ ಕಳೆದುಕೊಳ್ಳಲಿದ್ದಾರೆ ಎಂದು ನಾನು 2018ರ ಚುನಾವಣೆ ಸಂದರ್ಭದಲ್ಲೇ ಹೇಳಿದ್ದೆ. ಈಗ ಚಿಮ್ಮನಕಟ್ಟಿ ಹೇಳಿಕೆಯಿಂದ ಅದು ನಿಜವಾದಂತಾಗಿದೆ ಎಂದು ಹೇಳಿದರು.
ಬಿಜೆಪಿಯಲ್ಲಿ ಸುನಾಮಿ, ಸುಂಟರಗಾಳಿ ಉಂಟಾಗುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಶ್ರೀರಾಮುಲು, ಸಿದ್ದರಾಮಯ್ಯ ಇರುವ ಕಡೆ ಸುನಾಮಿ, ಸುಂಟರಗಾಳಿ ಉಂಟಾಗುತ್ತದೆ. ಹಾಗಾಗಿ ಕಾಂಗ್ರೆಸ್ನವರು ಮೊದಲು ಅವರ ಪಕ್ಷದ ಬಗ್ಗೆ ಮಾತನಾಡಲಿ. ತಪ್ಪಿದಲ್ಲಿ ಇನ್ನು ಕೆಲವು ದಿನಗಳ ನಂತರ ತಾವು ಎಲ್ಲಿದ್ದೇವೆ ಎಂದು ಹುಡುಕಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.