ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲೆಗೆ ತೆರಳಲು ಬಸ್ ಗಾಗಿ ಕಾಯುತ್ತ ನಿಂತಿದ್ದ ವಿದ್ಯಾರ್ಥಿಗಳ ಮೇಲೆ ಖಾಸಗಿ ಬಸ್ ಹರಿದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ದುಗ್ಲಾಪುರದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಶಾಲೆಗೆ ಹೋಗಲು ಬಸ್‌ನಿಲ್ದಾಣದಲ್ಲಿ ವಿದ್ಯಾರ್ಥಿಗಳು ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ಖಾಸಗಿ ಬಸ್ಸೊಂದು ರಸ್ತೆ ಬದಿ ನಿಂತಿದ್ದ ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದಿದೆ. ಅದರ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದು, ಉಳಿದ ನಾಲ್ವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿಯರನ್ನು ಕೂಡಲೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ವೇಗವಾಗಿ ಬಂದ ಬಸ್ ಮನೆಗಳತ್ತ ನುಗ್ಗಿದೆ, ಡಿಕ್ಕಿಯ ರಭಸಕ್ಕೆ ಮನೆಯ ಮುಂಭಾಗದ ಛಾವಣಿ ಸಂಪೂರ್ಣ ಜಖಂಗೊಂಡಿದೆ.
ಘಟನಾ ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.