ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡಿನಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಸಂಭ್ರಮ. ಈ ಹಿನ್ನೆಲೆಯಲ್ಲಿ ನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಇಸ್ಕಾನ್ ದೇವಸ್ಥಾನಕ್ಕೆ ಇಂದು ಮತ್ತು ನಾಳೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಮುತ್ತಲಿನ ರಸ್ತೆಗಳ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.
ಡಾ.ರಾಜ್‌ಕುಮಾರ್ ರಸ್ತೆ ಮತ್ತು ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಎರಡೂ ದಿನ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳ ಸಂಚಾರ ಇರುವುದಿಲ್ಲ. ಬಸ್‌ಗಳು ಪರ್ಯಾಯ ರಸ್ತೆಗಳಲ್ಲಿ ಸಂಚರಿಸಬೇಕು ಎಂದು ಪೊಲೀಸರು ಹೇಳಿದ್ದಾರೆ.
ಮಾರ್ಗ ಬದಲಾವಣೆ ವಿವರ ಹೀಗಿದೆ
ಯಶವಂತಪುರ ಕಡೆಯಿಂದ ಒರಾಯನ್ ಮಾಲ್, ಡಾ.ರಾಜ್‌ಕುಮಾರ್ ರಸ್ತೆ ಮಾರ್ಗವಾಗಿ ಮೆಜೆಸ್ಟಿಕ್ ಕಡೆಗೆ ಹೋಗುವ ಕೆಎಸ್‌ಆರ್‌ಟಿಸಿ ಬಸ್‌ಗಳು ಮಾರಪ್ಪನಪಾಳ್ಯ, ಮೇಲ್ಸೇತುವೆ, ಬಿಎಚ್‌ಇಎಲ್ ಅಂಡರ್‌ಪಾಸ್ ಮೂಲಕ ಸಾಗಿ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ಬಲ ತಿರುವು ಪಡೆದು ನಂತರ ಮಾರ್ಗೋಸಾ ರಸ್ತೆ, ಕೆ.ಸಿ.ಜನರಲ್ ಆಸ್ಪತ್ರೆ ಜಂಕ್ಷನ್‌ನಲ್ಲಿಎಡಕ್ಕೆ ತಿರುಗಿ ಅಂಡರ್‌ಪಾಸ್ ಮೂಲಕ ಲಿಂಕ್ ರಸ್ತೆಗೆ ಹೋಗಿ ಶೇಷಾದ್ರಿಪುರ ಮಾರ್ಗದಲ್ಲಿ ಸಾಗಲಿದೆ.
ಯಶವಂತಪುರ ಕಡೆಯಿಂದ ವೆಸ್ಟ್ ಆಫ್ ಕಾರ್ಡ್ ರಸ್ತೆ, ಇಸ್ಕಾನ್ ದೇವಸ್ಥಾನ, ಮಹಾಲಕ್ಷ್ಮೇ ಲೇಔಟ್ ಪ್ರವೇಶದ್ವಾರದ ಮಾರ್ಗವಾಗಿ ಮಾಗಡಿ ರಸ್ತೆ, ವಿಜಯನಗರದ ಕಡೆಗೆ ಸಂಚರಿಸುವ ಬಿಎಂಟಿಸಿ ಬಸ್‌ಗಳು ಮತ್ತು ಇತರೆ ವಾಹನಗಳು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲಿದೆ.
ಯಶವಂತಪುರ ಕಡೆಯಿಂದ ಬರುವ ವಾಹನಗಳು ಜಿಎಸ್‌ಎಫ್ ಸರ್ಕಲ್, ಒರಾಯನ್ ಮಾಲ್ ಮುಂಭಾಗದ ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ಸಾಗಿ 10ನೇ ಕ್ರಾಸ್ ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಲಿವೆ. ಬಳಿಕ ಡಯಕಾನ್ ಜಂಕ್ಷನ್, ರಾಜಾಜಿನಗರ 1ನೇ ಬ್ಲಾಕ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಸಾಗಿ ಮಾಗಡಿ ರಸ್ತೆ, ವಿಜಯನಗರದ ಕಡೆಗೆ ಸಾಗಲಿದೆ.