Monday, August 8, 2022

Latest Posts

ಉತ್ತರ ಕರ್ನಾಟಕದಲ್ಲಿ ಉದ್ಯಮಗಳು ಹಿಂದುಳಿದಿರುವುದು ನೋವಿನ ಸಂಗತಿ: ಸಚಿವ ಸಿ.ಸಿ.ಪಾಟೀಲ್

ಹೊಸದಿಗಂತ ವರದಿ, ಗದಗ:

ರಾಜ್ಯ ಅಭಿವೃದ್ದಿ ಹೊಂದಬೇಕಾದರೆ ಉದ್ಯಮಗಳು ಸ್ಥಾಪನೆಯಾಗಬೇಕು. ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಕೈಗಾರಿಕೋಧ್ಯಮಗಳು ಹಿಂದುಳಿದಿವೆ ಎಂದು ಗುರುತಿಸಲ್ಪ್ಪಟ್ಟಿರುವದರಿಂದ ಕೈಗಾರಿಕೆಗಳ ಸ್ಥಾಪನೆಗಾಗಿ ಸರಕಾರದಿಂದ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವದು ಈ ಭಾಗದ ಉದ್ದಿಮೆದಾರರು ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗುವಂತೆ ಸಣ್ಣ ಕೈಗಾರಿಕೆ, ವಾರ್ತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ಕರೆ ನೀಡಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಜರುಗಿದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಬೃಹತ್ ಕೈಗಾರಿಕೆ ಇಲಾಖೆ ಸಚಿವ ಜಗದೀಶ ಶೆಟ್ಟರ, ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮದ ಅಧ್ಯಕ್ಷ ಕಳಕಪ್ಪ ಬಂಡಿ ಹಾಗೂ ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ ಅವರೊಂದಿಗೆ ಚರ್ಚಿಸಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಯಾವರೀತಿಯಾಗಿ ಕೈಗಾರಿಕೆಗಳನ್ನು ಸ್ಥಾಪಿಸಲು ಸಾದ್ಯವಿದೆ ಎಂದು ಉದ್ಯಮದಾರರೊಂದಿಗೆ ಚರ್ಚಿಸಿ ಅನುಕೂಲತೆಗಳನ್ನು ಕಲ್ಪಿಸಲಾಗುವುದು. ಉತ್ತರ ಕರ್ನಾಟಕದಲ್ಲಿ ಉದ್ಯಮಗಳು ಬರಲು ಹಾಗೂ ಉದ್ಯೋಗ ಸೃಷ್ಟಿಸಲು ಗಮನ ಹರಿಸಲಾಗುವುದು ಎಂದು ಸಚಿವ ಸಿ.ಸಿ.ಪಾಟೀಲ ಅವರು ಹೇಳಿದರು.
ಮುಂದಿನ ಮೂರು ವರ್ಷಗಳಲ್ಲಿ ಹತ್ತು ಸಾವಿರ ಕೋಟಿ ರೂ.ಗಳ ಅನುದಾನವನ್ನು ಖಾಸಗಿ ಸಹಭಾಗಿತ್ವದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗಾಗಿ ಮೀಸಲಿರಿಸಲಾಗಿದೆ. ಪೀಣ್ಯ ಕೈಗಾರಿಕಾ ವಸಾಹುತ ಪ್ರದೇಶಗಳ ಮೂಲೂಭೂತ ಸೌಲಭ್ಯಗಳ ಅಭಿವೃದ್ಧಿಗಾಗಿ ೧೦೦ ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ನೀಡಲಾಗಿದ್ದು ಟೌನಶಿಪ್ ನಿರ್ಮಾಣ ಮಾಡಲಾಗುವದು.
ಕೃಷಿ ಆಧಾರಿತ ಕೈಗಾರಿಕೆಗಳಿಗೆ ೧೫೦ ಕೋಟಿ ರೂ ಸಬ್ಸಿಡಿ ಹಣ ನೀಡಲು ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದು ಆಯವ್ಯಯದಲ್ಲಿ ಮಹಿಳೆಯರಿಗಾಗಿ ೨ ಕೋಟಿ ರೂ.ಗಳ ವರೆಗೆ ಶೇ.೪ ರಷ್ಟು ಬಡ್ಡಿ ದರದಲ್ಲಿ ಕೈಗಾರಿಕೆ ಆರಂಭಿಸಲು ಸಾಲ ಸೌಲಭ್ಯಗಳನ್ನು ಒದಗಿಸಲಾಗುವದು. ನೂತನ ಕೈಗಾರಿಕಾ ನೀತಿ ೨೦೨೦-೨೫ ರಲ್ಲಿ ಅನೇಕ ಪ್ರೋತ್ಸಾಹ ಅಂಶಗಳಿದ್ದು ಮೂರು ವರ್ಷಗಳ ವರೆಗೆ ಪ್ರತಿ ಯೂನಿಟ್‌ಗೆ ೧ ರೂ. ದರದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುವದು. ಇಲಾಖೆ ಹಾಗೂ ನಿಗಮದಲ್ಲಿರುವ ಹಳೆಯ ಕಡತಗಳನ್ನು ಮುಂದಿನ ಎರಡು ತಿಂಗಳೊಳಗಾಗಿ ವಿಲೇವಾರಿ ಮಾಡಲು ಅಗತ್ಯದ ಕ್ರಮ ವಹಿಸಲಾಗುವದು ಎಂದರು.
ಈ ಸಂದರ್ಭದಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಳಕಪ್ಪ ಬಂಡಿ, ಕಾಸಿಯಾ ಅಧ್ಯಕ್ಷ ಕೆ.ಬಿ. ಅರಸಪ್ಪ, ಜಿ.ಪಂ. ಅಧ್ಯಕ್ಷ ಈರಪ್ಪ ನಾಡಗೌಡ್ರ, ಜಿಲ್ಲಾ ಚೇಂಬರ ಆಫ್ ಕಾಮರ್ಸ ಅಧ್ಯಕ್ಷ ಆನಂದ ಪೋತ್ನಿಸ್, ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಅಪರ ನಿರ್ದೇಶಕ ಎಚ್.ಎಂ.ಶ್ರೀನಿವಾಸ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss