ಹೊಸದಿಗಂತ ಡಿಜಿಟಲ್ ಡೆಸ್ಕ್:
ಚನ್ನಪಟ್ಟಣ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರ ವಿರುದ್ಧ ಮಗಳು ನಿಶಾ ಯೋಗೇಶ್ವರ್ ಅವರು ಮಾತನಾಡದಂತೆ ಮಲತಾಯಿ (ಯೋಗೇಶ್ವರ್ ಅವರ 2ನೇ ಹೆಂಡತಿ) ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ.
ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡುತ್ತಾ ಅವರ ಮಗಳು ನಿಶಾ ಯೋಗೇಶ್ವರ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದರು.
ಉಪ ಚುನಾವಣೆ ಸಂದರ್ಭಈ ವಿಡಿಯೋ ಭಾರೀ ವೈರಲ್ ಆಗಿತ್ತು. ಇದರಲ್ಲಿ ನಿಶಾ ಯೋಗೇಶ್ವರ್ ಅವರು ಡಿ.ಕೆ. ಶಿವಕುಮಾರ್ ಬಳಿ ತಮ್ಮ ಅಶ್ಲೀಲ ವಿಡಿಯೋದ ಸಿಡಿ ಇಟ್ಟುಕೊಂಡಿದ್ದಾರೆ ಎಂದೂ ಆರೋಪ ಮಾಡಿದ್ದರು. ಇದಕ್ಕೆ ಅವರ ತಂದೆ ಯೋಗೇಶ್ವರ್ ಅವರೂ ಕಾರಣವೆಂದು ಆರೋಪಿಸಿದ್ದರು.
ಚುನಾವಣೆ ಸಂದರ್ಭದಲ್ಲಿ ನಿಶಾ ಯೋಗೇಶ್ವರ್ ಅವರ ಆರೋಪದ ವಿಡಿಯೋ ಪರಿಣಾಮ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ರಾಜಕೀಯದ ಮೇಲೂ ಬೀರಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಹೆಂಡತಿ ಪಿ.ವಿ. ಶೀಲಾ ಅವರು ಗಂಡ ಯೋಗೇಶ್ವರ್ ವಿರುದ್ಧ ಅವರ ಮೊದಲ ಪತ್ನಿಯ ಮಗಳು ಯಾವುದೇ ಹೇಳಿಕೆ ನೀಡದಂತೆ ತಡೆಯಾಜ್ಞೆ ತಂದಿದ್ದಾರೆ.
ಯೋಗೇಶ್ವರ್ ಪತ್ನಿ ಪಿ.ವಿ.ಶೀಲಾ ನನ್ನ ಪತಿ ಸಿ.ಪಿ.ಯೋಗೇಶ್ವರ್ ವಿರುದ್ದ ಮಲಮಗಳು ನಿಶಾ ಯೋಗೇಶ್ವರ್ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಈ ಸಂಬಂಧ ಬೆಂಗಳೂರಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದರು. ಈ ಅರ್ಜಿಯನ್ನು ಪರಿಶೀಲನೆ ಮಾಡಿದ ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರ ಪೀಠವು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಿ.ಪಿ.ಯೋಗೇಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಅವಹೇಳನಕಾರಿ ಹೇಳಿಕೆ ನೀಡದಂತೆ ಮಧ್ಯಂತರ ಆದೇಶ ಹೊರಡಿಸಲಾಗಿದೆ.
ಇನ್ನು ಪ್ರತಿವಾದಿಗಳಾದ ಇನ್‌ಸ್ಟಾಗ್ರಾಂ, ಎಕ್ಸ್ ಕಾರ್ಪ್ (ಟ್ವಿಟರ್), ಗೂಗಲ್ ಮತ್ತು ಯೂ–ಟ್ಯೂಬ್ ಜಾಲತಾಣಗಳಲ್ಲಿ ನಿಶಾ ಯೋಗೇಶ್ವರ್ ಅವರ ನಿಂದನಾತ್ಮಕ ಹೇಳಿಕೆಗಳನ್ನು ಅಪ್‌ಲೋಡ್ ಮಾಡಬಾರದು. ಈಗಾಗಲೇ ಪ್ರಸಾರ ಮಾಡಲಾಗಿರುವ ತುಣಕುಗಳನ್ನು ತಡೆಹಿಡಿಯಬೇಕೆಂದು ಸೂಚಿಸಲಾಗಿದೆ. ಈ ಬಗ್ಗೆ ಯೋಗೇಶ್ವರ್ ವಿರುದ್ಧ ಮಾನಹಾನಿಕರ ಹೇಳಿಕ ನೀಡದಂತೆ ಮಧ್ಯಂತರ ತಡೆಯಾಜ್ಞೆ ಆದೇಶ ನೀಡಿ ವಿಚಾರಣೆ ಮುಂದೂಡಲಾಗಿದೆ.