ಹೊಸದಿಗಂತ ವರದಿ, ಮಂಗಳೂರು:
ಭ್ರಷ್ಟಾಚಾರದ ಆರೋಪ ಹೊತ್ತಿರುವ ವಸತಿ ಸಚಿವ ಜಮೀರ್ ಅಹಮ್ಮದ್ ಅವರು ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಪರಿಶುದ್ದ, ಪ್ರಾಮಾಣಿಕನಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಬಡವರ ಹೆಸರಿನಲ್ಲಿ ದುಡ್ಡು ತಿಂದಿಲ್ಲ ಎಂದಿದ್ದಾರೆ.
ಹಾಗಾದರೆ ಅವರು ಮತ್ತೆ ಯಾವ ಹಣ ತಿಂದಿದ್ದಾರೆ? ಅಲ್ಪಸಂಖ್ಯಾತರ ಕಲ್ಯಾಣದ ಹಣದಲ್ಲಿ ತಿಂದಿದ್ದಾರಾ? ತನಿಖೆ ಪಾರದರ್ಶಕವಾಗಿ ನಡೆಯಬೇಕಾದರೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ತನಿಖೆ ಪೂರ್ಣವಾಗಿ ನಿರ್ದೋಷಿ ಎಂದು ವರದಿ ಬಂದರೆ ಅನಂತರ ಸಚಿವ ಸಂಪುಟ ಸೇರಿಕೊಳ್ಳಲಿ ಎಂದರು.
‘ರಾಜ್ಯ ಸರಕಾರದ ಬಳಿ ಹಣ ಇಲ್ಲ’ ಎಂದು ಹೇಳಿಕೆ ನೀಡಿರುವ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಅನಂತರ ‘ನಾನು ಹಾಗೆ ಹೇಳಿಯೇ ಇಲ್ಲ’ ಎಂಬುದಾಗಿ ಇನ್ನೊಂದು ಹೇಳಿಕೆ ನೀಡಿದ್ದಾರೆ. ಅವರು ಈ ರೀತಿ ತದ್ವಿರುದ್ದ ಹೇಳಿಕೆ ನೀಡುವ ಬದಲು ಇರುವ ಸತ್ಯವನ್ನು ಒಪ್ಪಿಕೊಳ್ಳಬೇಕು ಎಂದು ಸಿ.ಟಿ.ರವಿ ಹೇಳಿದರು.
ಗೃಹಸಚಿವರ ಮೇಲೆ ನಾವು ಮತ್ತು ಜನರೂ ಅಲ್ಪಸ್ವಲ್ಪ ಗೌರವ ಇಟ್ಟುಕೊಂಡಿದ್ದೇವೆ. ಆದರೆ ಅವರ ಇಂತಹ ಭಿನ್ನ ಹೇಳಿಕೆಗಳಿಂದ ಅವರ ವ್ಯಕ್ತಿತ್ವ ದುರ್ಬಲಗೊಳ್ಳುತ್ತದೆ. ಅವರು ಜನರ ದೃಷ್ಟಿಯಲ್ಲಿ ಸಣ್ಣವರಾಗುತ್ತಾರೆ. ಅದರ ಬದಲು ಇರುವ ಸತ್ಯವನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದರು.