ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢದ ಬಲರಾಮ್‌ಪುರ ಜಿಲ್ಲೆಯ ಸಶಸ್ತ್ರ ಪಡೆ(ಸಿಎಎಫ್)ಯ ಶಿಬಿರದಲ್ಲಿ ಬುಧವಾರ ಯೋಧನೊಬ್ಬ ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಇಬ್ಬರು ಯೋಧರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ.
ರಾಯ್‌ಪುರದಿಂದ ಸುಮಾರು 400 ಕಿಮೀ ದೂರದಲ್ಲಿರುವ ಸಮ್ರಿ ಪಥ್ ಪೊಲೀಸ್ ಠಾಣಾ ವ್ಯಾಪ್ತಿಯ ಭೂತಾಹಿ ಮೋಡ್ ಪ್ರದೇಶದಲ್ಲಿ ಸಿಎಎಫ್‌ನ 11ನೇ ಬೆಟಾಲಿಯನ್‌ನ ‘ಬಿ’ ಕಂಪನಿಯ ಶಿಬಿರದಲ್ಲಿ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಮಹಾನಿರೀಕ್ಷಕ(ಸುರ್ಗುಜಾ ಶ್ರೇಣಿ) ಅಂಕಿತ್ ಗಾರ್ಗ್ ಅವರು ಹೇಳಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾನ್‌ಸ್ಟೆಬಲ್ ಅಜಯ್ ಸಿದರ್ ತನ್ನ ಸರ್ವಿಸ್ ರಿವಾಲ್ವರ್ ನಿಂದ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಘಟನೆಯಲ್ಲಿ ಕಾನ್ಸ್‌ಟೇಬಲ್ ರೂಪೇಶ್ ಪಟೇಲ್ ಸ್ಥಳದಲ್ಲೇ ಮೃತಪಟ್ಟರೆ, ಇನ್ನೋರ್ವ ಕಾನ್‌ಸ್ಟೆಬಲ್ ಸಂದೀಪ್ ಪಾಂಡೆ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.