ಶೀತ-ನೆಗಡಿ ಮತ್ತು ಕೋವಿಡ್ ಅನ್ನು ಆರ್ಟಿಪಿಸಿಆರ್ ಪರೀಕ್ಷೆ ಪ್ರತ್ಯೇಕಿಸಬಲ್ಲದಾ?

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಒಂದೆಡೆ ಕೋವಿಡ್-19 ಮೂರನೇ ಅಲೆ, ಒಮಿಕ್ರಾನ್ ಸೋಂಕು ಸುದ್ದಿಯಾಗುತ್ತಿದ್ದರೆ, ಇನ್ನೊಂದೆಡೆ ವೈರಸ್ ಪರೀಕ್ಷೆಯ ಕುರಿತು ಸಾಕಷ್ಟು ಊಹಾಪೋಹಗಳು ಈಗಲೂ ಹರಿದಾಡುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ನಕಲಿ ಸುದ್ದಿಗಳು ವೈರಲ್ ಆಗುತ್ತಿವೆ… ಅವುಗಳಲ್ಲಿ ಒಂದು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಸಂಬಂಧಿಸಿದೆ ಮತ್ತು ಇದು ಕೋವಿಡ್-19 ಮತ್ತು ಇನ್ಫ್ಲುಯೆನ್ಸಾ ಇತ್ಯಾದಿಗಳ ನಡುವೆ ವ್ಯತ್ಯಾಸ ತೋರಿಸುವುದಿಲ್ಲ ಎಂದು ಸುಳ್ಳು ಹರಡಲಾಗುತ್ತಿದೆ.

ಕಳೆದೆರಡು ವರ್ಷಗಳಿಂದಿರುವ ಈ ಗೊಂದಲ, ಈಗಲೂ ಮುಂದುವರಿಯುತ್ತಲೇ ಇದೆ. ಇದನ್ನು ನಿವಾರಿಸುವ ಪಯತ್ನ ಮಾಡಿದ್ದಾರೆ, ಉಡುಪಿ ಡಾ. ಟಿ.ಎಂ.ಎ. ಪೈ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಶಶಿಕಿರಣ್ ಉಮಾಕಾಂತ್.

ಪರೀಕ್ಷೆಯ ವಾಸ್ತವ ಹೀಗಿದೆ:
ಆರ್‌ಟಿ-ಪಿಸಿಆರ್ (ರಿವರ್ಸ್ ಟ್ರಾನ್ಸ್‌ಕ್ರಿಪ್ಷನ್-ಪಾಲಿಮರೇಸ್ ಚೈನ್ ರಿಯಾಕ್ಷನ್) ಕೋವಿಡ್-19 ಮತ್ತು ಇನ್ಫ್ಲುಯೆನ್ಸವನ್ನು ಪ್ರತ್ಯೇಕವಾಗಿ ಗುರುತಿಸುತ್ತದೆ. ನಾವು ಏನನ್ನು ಪರೀಕ್ಷಿಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿದೆ. ಇನ್ಫ್ಲುಯೆನ್ಸಾ, ಎಬೋಲಾ, ಹರ್ಪಿಸ್, ಚಿಕನ್ ಪಾಕ್ಸ್, ದಡಾರ, ಸರ್ಪಸುತ್ತು ಮುಂತಾದ ರೋಗಗಳಿಗೆ ಕಾರಣವಾಗುವ ವೈರಸ್‌ಗಳು ಸೇರಿದಂತೆ ವಿವಿಧ ರೋಗಕಾರಕಗಳನ್ನು ಪತ್ತೆಹಚ್ಚಲು ಪಿಸಿಆರ್ ಹೆಚ್ಚು ವ್ಯಾಪಕವಾಗಿ ಬಳಸಲಾಗುವ ರೋಗನಿರ್ಣಯ ಪರೀಕ್ಷೆಗಳಲ್ಲಿ ಒಂದಾಗಿದೆ.

ಆರ್‌ಟಿ-ಪಿಸಿಆರ್ ಕೇವಲ ಒಂದು ವಿಧಾನ – ಇದನ್ನು ಅನೇಕ ನಿರ್ದಿಷ್ಟ ವೈರಸ್‌ಗಳನ್ನು ಪರೀಕ್ಷಿಸಲು ಬಳಸಲಾಗುತ್ತದೆ. ಇದು ವಿವಿಧ ಜೀವಿಗಳ ನಿರ್ದಿಷ್ಟ ಅನುವಂಶಿಕ ಅನುಕ್ರಮಗಳನ್ನು ಹುಡುಕುವ ಮೂಲಕ ವೈರಸ್ ಮತ್ತು ಇತರ ಸೂಕ್ಷ್ಮಜೀವಿಗಳನ್ನು ಗುರುತಿಸುತ್ತದೆ.

ಕೋವಿಡ್-19 ಆರ್‌ಟಿ-ಪಿಸಿಆರ್ ಪರೀಕ್ಷೆ: ಈ ಪರೀಕ್ಷೆಯು ಎಸ್‌ಎಆರ್‌ಎಸ್-ಸಿಒವಿ-2 ನ ಆನುವಂಶಿಕ ವಸ್ತುವನ್ನು (ಅರ್‌ಎನ್‌ಎ) ಪತ್ತೆಹಚ್ಚುತ್ತದೆ. ಇದು ಕೋವಿಡ್-19 ಗೆ ಕಾರಣವಾಗುವ ವೈರಸ್.

ಇನ್ಫ್ಲುಯೆನ್ಸಾ ಆರ್‌ಟಿ-ಪಿಸಿಆರ್ ಪರೀಕ್ಷೆ:
ಈ ಪರೀಕ್ಷೆಯು ಇನ್ಫ್ಲುಯೆನ್ಸಾ ವೈರಸ್ಸಿನ ಆನುವಂಶಿಕ ವಸ್ತುವನ್ನು (ಆರ್‌ಎನ್‌ಎ) ಪತ್ತೆಹಚ್ಚುತ್ತದೆ. ಇನ್ಫ್ಲುಯೆನ್ಸಾ ಎ, ಎಚ್1ಎನ್1, ಎಚ್3ಎನ್2, ಎಚ್5ಎನ್ 1 ಇನ್ಫ್ಲುಯೆನ್ಸಾ ಬಿ ಮತ್ತು ಇತರ ಇನ್ಫ್ಲುಯೆನ್ಸಾ ರೋಗವನ್ನು ಉಂಟುಮಾಡುವ ವೈರಸ್ಸುಗಳು ಎಂದು ಡಾ. ಶಶಿಕಿರಣ್ ಉಮಾಕಾಂತ್ ವಿವರಿಸಿದ್ದಾರೆ.

ಈ ಪರೀಕ್ಷೆಗಳ ಹಿಂದಿನ ವಿಜ್ಞಾನದ ಬಗ್ಗೆ ತಿಳಿದಿಲ್ಲದ ಜನರು ತಮ್ಮ ಕಲ್ಪನೆಯನ್ನು ಬಳಸಿ ಮತ್ತು ಕಾಲ್ಪನಿಕ ಕಥೆಗಳನ್ನು ಸೃಷ್ಟಿಸಿ ಜನರನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ ಎಂದು ಡಾ. ಶಶಿಕಿರಣ್ ವಿಷಾದ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!