ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಹಲವು ಫೇಮಸ್ ತಿಂಡಿ ಹೊಟೇಲ್‌ಗಳಲ್ಲಿ ಇಡ್ಲಿ ತಯಾರು ಮಾಡೋದಕ್ಕೆ ಬಟ್ಟೆ ಬದಲು ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದು, ಇದರಿಂದ ಕ್ಯಾನ್ಸರ್ ಬರಬಹುದು ಎನ್ನುವ ಅಂಶ ಬಯಲಾಗಿತ್ತು. ಇದಾದ ಬೆನ್ನಲ್ಲೆ ಈ ಹೊಟೇಲ್‌ಗಳು ತಮ್ಮ ರೆಗ್ಯುಲರ್ ಇಡ್ಲಿ ಕಸ್ಟಮರ್ಸ್‌ಗಳನ್ನು ಕಳೆದುಕೊಂಡಿದ್ದಾರೆ.
ಮಲ್ಲೇಶ್ವರಂ, ಆರ್‌ಟಿ ನಗರ ಮತ್ತು ಜಯನಗರದಂತಹ ಪ್ರಮುಖ ಪ್ರದೇಶಗಳಲ್ಲಿರುವ ಹೋಟೆಲ್ ಗಳಲ್ಲಿ ಇಡ್ಲಿ ಮಾರಾಟದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.
ಗ್ರಾಹಕರ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ. ಆದರೆ, ಇಡ್ಲಿ ಆರ್ಡರ್ ಮಾಡಲು ಜನರು ಹಿಂದೇಟು ಹಾಕುತ್ತಿದ್ದಾರೆ, ಕೆಲವರು ಇಡ್ಲಿ ತಯಾರಿಕೆ ವೇಳೆ ಬಟ್ಟೆ ಬಳಸುತ್ತಿದ್ದೀರಾ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆಂದು ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ. ಇಡ್ಲಿ ತಯಾರಿಗೆ ವೇಳೆ ಸ್ಟೇನ್‌ಲೆಸ್ ಸ್ಟೀಲ್ ಮತ್ತು ಮಸ್ಲಿನ್ ಬಟ್ಟೆಯನ್ನು ಮಾತ್ರ ಬಳಕೆ ಮಾಡಲಾಗುತ್ತಿದ್ದು, ನೈರ್ಮಲ್ಯ ಮಾನದಂಡಗಳನ್ನು ಕಾಯ್ದುಕೊಳ್ಳಲಾಗುತ್ತಿದೆ ಎಂದು ರೆಸ್ಟೋರೆಂಟ್ ಗಳ ಮಾಲೀಕರು ಹೇಳಿದ್ದಾರೆ.
ಮಲ್ಲೇಶ್ವರಂನಲ್ಲಿರುವ ದರ್ಶಿನಿ ಉಪಹಾರ ಮಂದಿರದ ಮಾಲೀಕ ಪ್ರಜ್ವಲ್ ಶೆಟ್ಟಿ ಅವರು ಮಾತನಾಡಿ, ಇಡ್ಲಿಗಳನ್ನು ಒಮ್ಮೆಲೆ ತಯಾರಿಸುವುದಿಲ್ಲ. ಬೇಡಿಕೆಗಳ ಆಧರಿಸಿ ಆಗಾಗ ತಯಾರಿಸಲಾಗುತ್ತದೆ. ಆದರೆ, ಇತ್ತೀಚಿನ ಸುದ್ದಿಗಳ ಬಳಿಕ ಗ್ರಾಹಕರ ಆದ್ಯತೆಗಳು ಬದಲಾಗಿವೆ, ಇದು ಮಾರಾಟದಲ್ಲಿ ಕುಸಿತಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.