Saturday, August 13, 2022

Latest Posts

ಜೆಡಿಎಸ್ ಪಕ್ಷವನ್ನು ಯಾವುದೇ ಕಾರಣಕ್ಕೂ ನಂಬುವಂತಿಲ್ಲ: ಸಚಿವ ಸಿ.ಪಿ.ಯೋಗೇಶ್ವರ್

ಹೊಸದಿಗಂತ ವರದಿ, ಮೈಸೂರು:

ಜೆಡಿಎಸ್ ಪಕ್ಷವನ್ನು ಯಾವುದೇ ಕಾರಣಕ್ಕೂ ನಂಬುವಂತಿಲ್ಲ, ನಂಬಿಕೆಗೆ ಅರ್ಹವೂ ಅಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.

ಮಂಗಳವಾರ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ನಾಡ ಅಧಿದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಮೈಸೂರು ಮಹಾನಗರಪಾಲಿಕೆಯ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿಗೆ ಕೈಕೊಟ್ಟು, ಕಾಂಗ್ರೆಸ್ ‌ಜೊತೆ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಜೆಡಿಎಸ್‌ನ್ನು ಯಾವುದೇ ಕಾರಣಕ್ಕೂ ನಂಬುವುದಕ್ಕೆ ಸಾಧ್ಯವಿಲ್ಲ, ಬೆಂಗಳೂರಿನ ವಿಧಾನಸೌದಧ ಮುಂದೆ ಮಹಾಘಟಬಂಧನ್ ಸಮಾವೇಶ ಮಾಡಿಕೊಂಡು ದೇಶ ಆಳಲು ಹೊರಟಿದ್ದರು. ಹಾಗಾಗಿ ಜೆಡಿಎಸ್‌ನ್ನು ನಾವು ನಂಬುವಂತಿಲ್ಲ ಜೆಡಿಎಸ್‌ಗೆ ಶಕ್ತಿ ತುಂಬಿದರೆ, ಅದು ನಮಗೆ ಮಾರಕವಾಗಲಿದೆ ಎಂದರು.

ಜೆಡಿಎಸ್ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನನ್ನ ಬಗ್ಗೆ ವೈಯಕ್ತಿಕವಾಗಿ ಕೀಳಾಗಿ ಮಾತನಾಡುತ್ತಿದ್ದರು. ಅದು ನನಗೆ ತುಂಬಾ ಘಾಸಿ ಆಯ್ತು, ಅದೇ ಕಾರಣಕ್ಕೆ ನಾನು ಸಹ ಮಾತನಾಡಿದೆ. ಪದೇ ಪದೇ ಹೆಚ್.ಡಿ. ಕುಮಾರಸ್ವಾಮಿ ನನ್ನನ್ನ ಟೀಕಿಸುತ್ತಿದ್ದಾರೆ. ಆ ರೀತಿ ಮಾತನಾಡದಂತೆ ನಾಲ್ಕು ಜನರ ಬಳಿ ಹೇಳಿ ಕಳುಹಿಸಿದೆ.

ಆದರೂ ಅವರು ನನ್ನ ವಿರುದ್ಧ ಮಾತನಾಡೋದನ್ನ ನಿಲ್ಲಿಸಲಿಲ್ಲ. ತೇಜೋವಧೆ ಮುಂದುವರೆಸಿದರು, ನೀರಿನ ಪೈಪ್ ಲೆಟರ್ ಹೆಡ್‌ನಲ್ಲಿ ದುಡ್ಡು ಮಾಡುತ್ತಾನೆ ಎಂದು ನನ್ನ ವಿರುದ್ಧ ಆರೋಪ ಮಾಡ್ತಾರೆ. ನಮ್ಮ ಕಾರ್ಯಕರ್ತರಿಗೆ ನಾನು ಶಿಫಾರಸು ಮಾಡಬಾರದಾ? ಅದನ್ನು ಟೀಕೆ ಮಾಡಿದರೆ ಹೇಗೆ? ಆದ್ದರಿಂದ ತಡೆದುಕೊಳ್ಳಲು ಆಗದೆ ವೈಯಕ್ತಿಕವಾಗಿ ಟೀಕೆ ಮಾಡಿದ್ದೇನೆ.

ರಾಜಕಾರಣದಲ್ಲಿ ಯಶಸ್ಸು ಗಳಿಸಲು ಜನತೆಯ ಆಶೀರ್ವಾದ ಮುಖ್ಯ. ಇಲ್ಲಸಲ್ಲದ ವೈಯಕ್ತಿಕ ಟೀಕೆಗಳನ್ನ ಯಾರೂ ಮಾಡಬಾರದು. ಸಾರ್ವಜನಿಕ ಜೀವನದಲ್ಲಿ ಇತಿಮಿತಿಯಲ್ಲೇ ಬದುಕಿದ್ದೇನೆ. ತಾಳ್ಮೆ ಕಟ್ಟೆ ಒಡೆದಿದ್ದಕ್ಕೆ ಹೆಚ್.ಡಿ. ಕುಮಾರಸ್ವಾಮಿ ಬಗ್ಗೆ ವೈಯಕ್ತಿವಾಗಿ ಟೀಕಿಸಿದೆ ಎಂದು ಸಮರ್ಥಿಸಿಕೊಂಡರು. ರಾಜಕಾರಣದಲ್ಲಿ ವೈಯಕ್ತಿಕ ಟೀಕೆ ತಪುö್ಪ ಅನ್ನೋದು ನನಗೂ ಗೊತ್ತಿದೆ. ಮಾತಿಗೆ ಮಾತು ಬೆಳೆದರೆ ಟೀಕೆಗಳು ಹೆಚ್ಚಾಗುತ್ತೆ. ಮಾಧ್ಯಮದವರು ಹೆಚ್.ಡಿ. ಕುಮಾರಸ್ವಾಮಿ ಅವರಿಗೂ ಬುದ್ಧಿವಾದ ಹೇಳಿದರೆ ಒಳ್ಳೆಯದು ಎಂದರು.

ಇನ್ನು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯವನ್ನ ನಾನು ಮಿಶ್ರಣ ಮಾಡೋದಿಲ್ಲ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss