Saturday, February 4, 2023

Latest Posts

ಕರ್ನಾಟಕಕ್ಕೆ ಹರಿದುಬರುತ್ತಿರುವ ಬಂಡವಾಳ ಅಂಕಿಸಂಖ್ಯೆಗೆ ಸೀಮಿತವಲ್ಲ: ಸಚಿವ ನಿರಾಣಿ ಧೃಡಮಾತು

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಸ್ಥಿತಿಗತಿ, ಉದ್ಯೋಗ ಸೃಷ್ಟಿ, ಉದ್ದಿಮೆಗಳಿಗೆ ಒದಗುತ್ತಿರುವ ವಾತಾವರಣ ಸೇರಿದಂತೆ ಹಲವು ವಿಟಾರಗಳ ಮೇಲೆ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಮಂಗಳವಾರ ಮಾತನಾಡಿದರು. ಪ್ರೆಸ್ ಕ್ಲಬ್ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಸಚಿವ ನಿರಾಣಿ ಅವರು ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಪತ್ರಕರ್ತರೊಂದಿಗಿನ ಸಂವಾದದಲ್ಲಿ ಪ್ರಸ್ತಾಪವಾದ ಪ್ರಮುಖ ವಿಷಯಗಳು ಹೀಗಿದ್ದವು..

-ನವಂಬರ್ ತಿಂಗಳಿನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡಿರುವ ಒಪ್ಪಂದಗಳು ಮುಂದಿನ 5 ವರ್ಷಗಳಲ್ಲಿ ಶೇ. 75 ರಷ್ಟು ಅನುಷ್ಠಾನಕ್ಕೆ ಬರುವುದರ ಬಗ್ಗೆ ಯಾವುದೇ ರೀತಿಯ ಅನುಮಾನ ಬೇಡ. ಕೇವಲ ಅಂಕಿ-ಸಂಖ್ಯೆಗಳನ್ನು ತೋರಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿಲ್ಲ.ಯೋಜನೆಗಳನ್ನು ರಾಜ್ಯದಲ್ಲಿ ಪ್ರಾರಂಭಿಸುವವರಿಗೆ ಮಾತ್ರ ಅನುಮೋದನೆ ನೀಡಿದ್ದೇವೆ. ಇನ್ನು 5 ವರ್ಷದೊಳಗೆ ಶೇ. 75ರಷ್ಟು ಎಂಒಯು ಅನುಷ್ಠಾನಕ್ಕೆ ಬರಲಿವೆ

-ನವೆಂಬರ್ ತಿಂಗಳಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಸುಮಾರು 9.81 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯಾಗಿವೆ. ಉದ್ದಿಮೆಗಳಿಗೆ ಬೇಕಾದ ನೀರು, ಭೂಮಿ, ವಿದ್ಯುತ್, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಈಗಾಗಲೇ ಸಂಬಂಧಪಟ್ಟ ಇಲಾಖೆಗಳ ಜೊತೆ ಸಮನ್ವಯ ಸಮಿತಿಯನ್ನು ರಚಿಸಿದ್ದೇವೆ.

-ಪ್ರಮಾಣ ಪತ್ರ ಆಧಾರಿತ ತಿಳುವಳಿ ಮಾಡಿಕೊಂಡಿರುವವರ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ಅಂದರೆ ಯಾರು ನಮ್ಮ ರಾಜ್ಯದಲ್ಲಿ ಖಚಿತವಾಗಿ ಹೂಡಿಕೆ ಮಾಡಿ ಉದ್ಯಮಗಳನ್ನು ಆರಂಭಿಸುತ್ತಾರೋ ಅಂತಹವರಿಗೆ ಮಾತ್ರ ಆದ್ಯತೆ ಕೊಟ್ಟಿದ್ದೇವೆ. ಹಿಂದಿನ ಸರ್ಕಾರಗಳ ಕೆಲವು ತಪ್ಪುಗಳಿಂದಾಗಿ ಯೋಜನೆಗಳು ಅನುಷ್ಠಾನವಾಗಲಿಲ್ಲ.

-ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಶೇ. 90ರಷ್ಟು ಟಯರ್-2 ಮತ್ತು 3 ನಗರಗಳಲ್ಲಿ ಹೂಡಿಕೆಯಾಗಿವೆ. 2 ಮತ್ತು 3ನೇ ಹಂತದ ನಗರಗಳಲ್ಲಿ ಬಂಡವಾಳ ಹೂಡಿಕೆಗೆ ಗಮನಹರಿಸಿದ್ದೇವೆ.

-ಕೈಗಾರಿಕಾ ಉದ್ದೇಶಗಳಿಗೆ ಯಾವ ರೈತರಿಂದಲೂ ಬಲವಂತವಾಗಿ ಜಮೀನನ್ನು ಸ್ವಾಧೀನಪಡಿಸಿಕೊಂಡಿಲ್ಲ. ಸ್ವಯಂಪ್ರೇರಿತವಾಗಿ ಬಂದವರ ಭೂಸ್ವಾಧಿನವಷ್ಟೇ ಆಗಿದೆ. ಕೃಷಿಯೋಗ್ಯ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ. ಕೆಲವು ಕಡೆ ರೈತರು ಸ್ವಯಂಪ್ರೇರಿತರಾಗಿ ಬಂದು ತಮ್ಮ ಜಮೀನನ್ನು ಮಾರುಕಟ್ಟೆ ದರದಂತೆ ಖರೀದಿ ಮಾಡಬೇಕೆಂದು ಮನವಿ ಮಾಡಿದ್ದಾರೆ. ಕೆಲವು ಕಡೆ ಜಮೀನೇ ಇಲ್ಲದ ರೈತರು ಪ್ರತಿಭಟನೆ ನಡೆಸುತ್ತಾರೆ. ಇದರ ಹಿಂದೆ ರಾಜಕೀಯ ಉದ್ದೇಶವೂ ಇದೆ. ರಾಜ್ಯದಲ್ಲಿ ಇದುವರೆಗೂ ನಾವು ಕೈಗಾರಿಕೆಗಳಿಗೆ ಕೇವಲ ಶೇ. 0.61 ಭೂಮಿಯನ್ನು ಮಾತ್ರ ಬಳಸಿಕೊಂಡಿದ್ದೇವೆ.

-ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೊರೆಯನ್ನು ತಗ್ಗಿಸಿ ಎಥನಾಲ್ ಬಳಕೆಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ಈಗಾಗಲೇ ಡೀಸೆಲ್ ಇಂಜಿನ್ ವಾಹನಗಳ ಅಮದನ್ನು ಬಂದ್ ಮಾಡಲಾಗಿದೆ. ವಾಹನಗಳನ್ನು ಬಯೋ ಫ್ಯೂಲ್ ಅಂದರೆ ಸ್ಥಳೀಯವಾಗಿ ದೊರೆಯುವ ಎಥೆನಾಲ್ ತೈಲದಿಂದ ವಾಹನ ಚಲಾವಣೆಗೆ ಒತ್ತು ನೀಡಲಾಗುತ್ತಿದೆ.

-ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಸಂಬಂಧ ಸರ್ಕಾರ ಸಕಾರಾತ್ಮಕವಾದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಹಿಂದುಳಿದ ವರ್ಗಗಳ ಆಯೋಗ ನೀಡುವ ವರದಿ ಮೇಲೆ ಮುಂದಿನ ಕ್ರಮವನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಪಂಚಮಸಾಲಿ ಸಮುದಾಯದ ಜೊತೆಗೆ ವೀರಶೈವ, ಲಿಂಗಾಯತ ಸಮುದಾಯದಲ್ಲಿರುವ ಸಣ್ಣ ಸಣ್ಣ ಸಮುದಾಯಕ್ಕೂ ಮೀಸಲಾತಿ ಸಿಗಬೇಕೆಂಬುದು ನಮ್ಮ ಆಶಯ. ಈಗಲೂ ನಮ್ಮ ಸಮುದಾಯದಲ್ಲಿ ಕೆಲವರಿಗೆ ಸೂಕ್ತವಾದ ಸಂವಿಧಾನ ಬದ್ಧ ಸ್ಥಾನಮಾನಗಳು ಸಿಕ್ಕಿಲ್ಲ. ನನ್ನ ಪ್ರಕಾರ ಸಮಸ್ತ ವೀರಶೈವ ಸಮುದಾಯಕ್ಕೆ ಮೀಸಲಾತಿ ಅಗತ್ಯ.

-ಕಮಿಷನ್ ಆರೋಪವೊಂದು ಇದೊಂದು ಆಧಾರರಹಿತ ಆರೋಪ. ಇದರಲ್ಲಿ ಸತ್ಯಾಂಶ ಇಲ್ಲ.

ಮಾಧ್ಯಮ ಸಂವಾದದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶ್ರೀಧರ್, ಪ್ರಧಾನ ಕರ್ಯದರ್ಶಿ ಬಿ.ಪಿ.ಮಲ್ಲಪ್ಪ , ಖಜಾಂಚಿ ಮೋಹನ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!