ರಾತ್ರೋರಾತ್ರಿ ನುಗ್ಗಿದ ಪಾಕಿಗಳನ್ನು ಬಡಿದಟ್ಟಿ ಕಾಶ್ಮೀರವನ್ನು ರಕ್ಷಿಸಿದ ಹೀರೋ ಕ್ಯಾಪ್ಟನ್ ರಾಮಪ್ರಕಾಶ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ( ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವಿಶೇಷ)
ಕ್ಯಾಪ್ಟನ್ ರಾಮಪ್ರಕಾಶ್ ಪಾಕಿಗಳ ಆಕ್ರಮಣದಿಂದ ಕಾಶ್ಮೀರವನ್ನು ರಕ್ಷಿಸಿದ ಹೀರೋಗಳಲ್ಲೊಬ್ಬರು. ಅಮೃತ್ ರಾಯ್ ದತ್ತಾ ಮತ್ತು ಶ್ರೀಮತಿ ಕೃಷ್ಣ ಕಾಂತ ದತ್ತಾ ದಂಪತಿಯ ಪುತ್ರ ರಾಮ್‌ ಪ್ರಕಾಶ್‌ 1911 ರ ಡಿ. 12 ರಂದು ಜಮ್ಮು ಜಿಲ್ಲೆಯ ಜುಲ್ಲಾಕಾ ಮೊಹಲ್ಲಾದಲ್ಲಿ ಜನಿಸಿದರು. ಜಮ್ಮುವಿನ ಪ್ರಿನ್ಸ್ ಆಫ್ ವೇಲ್ಸ್ ಕಾಲೇಜಿನಲ್ಲಿ 1934 ರಲ್ಲಿ ತಮ್ಮ ಉನ್ನತ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ರಾಜ್ಯ ಸಶಸ್ತ್ರ ಪಡೆಗೆ ಸೇರ್ಪಡೆಯಾದರು. 1941 ರಲ್ಲಿ ಕ್ಯಾಪ್ಟನ್ ಹುದ್ದೆಗೆ ಬಡ್ತಿ ಪಡೆದರು.
ವಿಭಜನೆಯ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶದ ಮುಗ್ಧ ಹಿಂದೂಗಳು ಪಾಕಿಸ್ತಾನಿ ಬುಡಕಟ್ಟು ದಾಳಿಕೋರರಿಂದ ದಾಳಿ, ಮತ್ತು ಲೂಟಿಗೆ ಒಳಗಾಗಿದ್ದರು. ಭಾರತೀಯ ಸೇನೆಯು ಶೀಘ್ರವೇ ಕಾಶ್ಮೀರಕ್ಕೆ ಆಗಮಿಸುವ ಸಾಧ್ಯತೆ ಹೆಚ್ಚಿದ್ದರಿಂದ, ಪಾಕ್ ಆಯಕಟ್ಟಿನ ಪಟ್ಟಣವಾದ ಮೀರ್ಪುರ್ ಜಿಲ್ಲೆಯ ತೆಹಸಿಲ್ ಕೋಟ್ಲಿಗೆ ಮುತ್ತಿಗೆ ಹಾಕಲು ಯೋಜಿಸಿತು. ಈ ಮೂಲಕ ಭಾರತೀಯ ಪ್ರದೇಶಗಳಿಗೆ ಸುಲಭವಾಗಿ ನುಗ್ಗಬಹುದು ಎಂಬುದು ಪಾಕ್‌ ಯೊಜನೆಯಾಗಿತ್ತು. 1947ರ ನವೆಂಬರ್ 16-17 ರ ಮಧ್ಯರಾತ್ರಿಯಲ್ಲಿ ಪಾಕಿಸ್ತಾನ ನೂರಾರು ಬಾಂಬ್‌ಗಳು, ಮಾರ್ಟರ್‌ ಗಳಿಂದ ಭೀಕರ ದಾಳಿ ನಡೆಸಿತು. ಕೋಟ್ಲಿ ಪಟ್ಟಣ ಬೆಂಕಿಯಿಂದ ಹೋತ್ತಿ ಉರಿದು ಧಗಧಗಿಸಲಾರಂಭಿಸಿತು.
ಸ್ವಲ್ಪ ಸಮಯದಲ್ಲೇ ಶತ್ರುಗಳು ಪಟ್ಟಣದ ಪೂರ್ವ ಭಾಗದಿಂದ ನುಗ್ಗಿಬಂದು, ಮನೆಗಳಿಗೆ ಬೆಂಕಿ ಹಚ್ಚಿದರು ಮತ್ತು ಅನೇಕ ನಾಗರಿಕರನ್ನು ಅಮಾನುಷವಾಗಿ ಕೊಂದರು. ಇಷ್ಟು ದೊಡ್ಡ ಪ್ರಮಾಣದ ಹಿಂಸಾತ್ಮಕ ಮತ್ತು ತೀವ್ರವಾದ ಹಿಂಸೆಯನ್ನು ಕಣಿವೆ ನಗರ ಹಿಂದೆಂದೂ ನೋಡಿರಲಿಲ್ಲ. ತಕ್ಷಣವೇ ಆಪ್ರದೇಶಕ್ಕೆ ಆಗಮಿಸಿದ 9ನೇ ಜೆಎಕೆ ಲೈಟ್ ಪದಾತಿದಳದ ಕಮಾಂಡರ್ ಕ್ಯಾಪ್ಟನ್ ರಾಮ್ ಪ್ರಕಾಶ್ ನೇತೃತ್ವದ ಸೇನೆಯು ಅದಮ್ಯ ಧೈರ್ಯವನ್ನು ಪ್ರದರ್ಶಿಸಿತು.ಕ್ಯಾಪ್ಟನ್ ರಾಮ್ ಪ್ರಕಾಶ್ ಎಲ್ಲಾ ಸೈನಿಕ ಶಕ್ತಿಗಳನ್ನು ಒಟ್ಟುಗೂಡಿಸಿ ತ್ವರಿತ ಪ್ರತಿದಾಳಿಯನ್ನು ಸಂಘಟಿಸಿದರು. ಈ ಪಟ್ಟಣ ಶತ್ರುಗಳನ್ನು ಹೊರದಬ್ಬುವ ಮೊದಲು ಮುಂಜಾನೆಯ ತನಕ ಪಟ್ಟಣದ ಕಿರಿದಾದ ಬೀದಿಗಳಲ್ಲಿ ಭಾರತೀಯ ಸೈನಿಕರು ಪಾಕಿಗಳೊಂದಿಗೆ ಭೀಕರವಾದ ಕಾಳಗ ನಡೆಸಿದರು. 200ಕ್ಕೂ ಹೆಚ್ಚು ಸೈನಿಕರ ಸಾವು ನೋವುಗಳನ್ನು ಅನುಭವಿಸಿದ ಪಾಕಿ ಪಡೆಯು ಈ ಘಟನೆಯಿಂದ ತೀವ್ರವಾಗಿ ನಡುಗಿತು ಮತ್ತು ಕೋಟ್ಲಿಯನ್ನು ತೊರೆದು ಓಡಲಾರಂಭಿಸಿತು.
ಆ ರಾತ್ರಿ ಇನ್ನೊಂದು ಮಹತ್ವಪೂರ್ಣ ಘಟನೆ ನಡೆದಿತ್ತು. ಸಿಕ್ಕಸಿಕ್ಕದ್ದನ್ನೆಲ್ಲಾ ಧ್ವಂಸಗೊಳಿಸುತ್ತಾ ಮಹಿಳೆಯರ ಮೇಲೆ ಅತ್ಯಾಚಾರ- ಹಿಂಸೆಗಳನ್ನು ನಡೆಸುತ್ತಿದ್ದ ಪಾಕಿ ಅನಾಗರಿಕ ಪಡೆಗಳ ದಾಳಿಯಿಂದ ಬೆದರಿದ ಕೋಟ್ಲಿಯ ಪೂಜ್ಯ ಸಂತ ಮಹಿಳೆ ಮಾತಾ ಭಗವಂತಿಯವರು ಸ್ತ್ರೀ ಗೌರವವನ್ನು ರಕ್ಷಿಸಿಕೊಳ್ಳುವ ಸಲುವಾಗಿ ತಮ್ಮ ನೂರಾರು ಹಿಂಬಾಲಕ ಹೆಣ್ಣುಮಕ್ಕಳೊಂದಿಗೆ ಜೌಹರ್ (ಸ್ವಯಂ ದಹನ)ಕ್ಕೆ ಮುಂದಾಗಿದ್ದರು. ಈ ವೇಳೆ ಅಲ್ಲಿಗೆ ಧಾವಿಸಿ ಬಂದ ಕ್ಯಾಪ್ಟನ್ ರಾಮ್ ಪ್ರಕಾಶ್ ಆ ಕೃತ್ಯವನ್ನು ಮಾಡದಂತೆ  ಪರಿಪರಿಯಾಗಿ ಅವರ ಮನವೊಲಿಸಿದರು. ನನ್ನ ಕೊನೆಯ ಉಸಿರಿನವರೆಗೂ ಹೋರಾಡಿ ನಿಮ್ಮನ್ನು ರಕ್ಷಿಸುತ್ತೇನೆ ಮತ್ತು ಕೋಟ್ಲಿ ಪಟ್ಟಣವನ್ನು ಎಂದಿಗೂ ಶತ್ರುಗಳ ಕೈವಶವಾಗಲು ಬಿಡುವುದಿಲ್ಲ ಎಂದು ಮಾತು ನೀಡಿ ರಣರಂಗವನ್ನು ಪ್ರವೇಶಿಸಿದರು. ಈ ಒಂದು ವಚನ ಪಾಕಿ ಸೈನಿಕರ ಭಯದಿಂದ ತಮ್ಮ ಜೀವನವನ್ನೇ ಅಂತ್ಯಗೊಳಿಸಿಕೊಳ್ಳಲು ಹೊರಟಿದ್ದ ಹಲವಾರು ಮಹಿಳೆಯರ ಜೀವಗಳನ್ನು ಉಳಿಸಿತು. ಕ್ಯಾಪ್ಟನ್ ರಾಮ್ ಪ್ರಕಾಶ್ ಅಂದು ಇರದಿದ್ದರೆ, ನೂರಾರು ಮಹಿಳೆಯರು ಜೌಹರ್ (ಸ್ವಯಂ ದಹನ) ಕ್ಕೆ ಪ್ರಾಣ ತೆತ್ತಿರುತ್ತಿದ್ದರು.
ಜಮ್ಮು ಮತ್ತು ಕಾಶ್ಮೀರ ರಾಜ್ಯ ಪಡೆಗಳ ನಿರ್ಭೀತ, ಧೈರ್ಯಶಾಲಿ ಮತ್ತು ಕೆಚ್ಚೆದೆಯ ಸೈನಿಕನಾಗಿದ್ದ ರಾಮ್‌ ಪ್ರಕಾಶ್ ಯಾವಾಗಲೂ‌ ಸೈನ್ಯದ ಮುಂಭಾಗದಲ್ಲಿ ನಿಂತು ಮುನ್ನಡೆಸುವ ಮೂಲಕ ತಮ್ಮ ಪಡೆಗಳಿಗೆ ಆದೇಶ ನೀಡುತ್ತಿದ್ದರು. ಕೋಟ್ಲಿಯು  ಕ್ಯಾಪ್ಟನ್ ರಾಮ್ ಪ್ರಕಾಶ್ ರಂತ ಧೀರನ ಕಾವಲಿನಲ್ಲಿ ಇರದಿದ್ದರೆ, ಈ ಪಟ್ಟಣಕ್ಕೂ ಮೀರ್ಪುರ, ಪಾಲಂದ್ರಿ ಮತ್ತು ರಾಜೌರಿಗಳ ದುಸ್ಥಿತಿ ಒದಗಿಬರುವ ಸಾಧ್ಯತೆ ಇತ್ತು. ಕ್ಯಾಪ್ಟನ್ ರಾಮ್ ಪ್ರಕಾಶ್ ತನ್ನ ಶೌರ್ಯಕ್ಕೆ ಹೆಸರುವಾಸಿಯಾಗಿದ್ದರು ಮತ್ತು ಶತ್ರು ಪಡೆಗಳು ಅವನ ಹೆಸರಿಗೆ ಭಯಪಡುತ್ತಿದ್ದವು. ಕೋಟ್ಲಿ ಪಟ್ಟಣವನ್ನು ತೀವ್ರ ಕೋಮುಗಲಭೆಗಳಿಂದ ರಕ್ಷಿಸಿದ ಶ್ರೇಯಸ್ಸು ಕ್ಯಾಪ್ಟನ್ ರಾಮ್ ಪ್ರಕಾಶ್ ಅವರಿಗೆ ಸಲ್ಲುತ್ತದೆ. ಕ್ಯಾಪ್ಟನ್ ರಾಮ್ ಪ್ರಕಾಶ್ ಅವರು ಬುಡಕಟ್ಟು ಆಕ್ರಮಣದ ಸಮಯದಲ್ಲಿ ಪ್ರದರ್ಶಿಸಿದ ಶೌರ್ಯಕ್ಕಾಗಿ ಕಾಶ್ಮೀರಿಗಳ ಮನಸ್ಸಿನಲ್ಲಿ ಅಚ್ಚಳಿಯದ ನೆನಪಾಗಿ ಉಳಿದುಹೋಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!