ಹೊಸದಿಗಂತ ವರದಿ,ಕಲಬುರಗಿ:
ಅಫಜಲಪುರ ಹೊರವಲಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಚಾಲಕ ಹಾಗೂ ನಾಲ್ವರು ಮಹಿಳೆಯರು ಸೇರಿ ಐವರು ದುರ್ಮರಣ ಹೊಂದಿದ್ದಾರೆ.
ಕಲಬುರಗಿ ಜಿಲ್ಲೆಯ ಗಾಣಗಾಪುರ ದತ್ತಾತ್ರೇಯ ದೇವರ ದರ್ಶನವನ್ನು ಮುಗಿಸಿ ಮಹಾರಾಷ್ಟ್ರ ಕಡೆಗೆ ತೆರಳುವಾಗ ಅಫಜಲಪುರದ ಬಳ್ಳೂರಗಿ ಕ್ರಾಸ್ ಬಳಿ ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ನಾಲ್ವರು ಮಹಿಳೆಯರು ಮತ್ತು ಚಾಲಕ ಸ್ಥಳದಲ್ಲಿಯೇ ಉಸಿರುಚಲ್ಲಿದ್ದಾರೆ. ಇಬ್ಬರು ಸ್ಥೀತಿ ಗಂಭೀರವಾಗಿದ್ದು, ಅಫಜಲಪುರ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ.
ಚಾಲಕನ ನಿರ್ಲಕ್ಷದಿಂದಾಗಿ ಕಾರು ಡಿಕ್ಕಿ ಹೊಡೆದಿದೆ. ವೇಗವಾಗಿ ಚಲಿಸುತ್ತಿದ್ದ ಕಾರು ಏಕಾಏಕಿ ರಸ್ತೆ ಬದಿಗೆ ಇಳಿದು ಮರಕ್ಕೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ಚಾಲಕ ನಿದ್ದೆ ಮಂಪರಿನಲ್ಲಿದ್ದನು ಎನ್ನಲಾಗುತ್ತಿದೆ.
ಘಟನಾ ಸ್ಥಳಕ್ಕೆ ದೌಡಾಯಿಸಿದ ಅಫಜಲಪುರ ಪೊಲೀಸರು ಗಾತಾಳುಗಳನ್ನು ಆಸ್ಪತ್ರೆ ರವಾನಿಸಿ ಕಾರಿನಲ್ಲಿ ಸಿಲುಕಿ ಮೃತರಾದವರ ಶವ ಹೊರಗೆ ತೆಗೆಯುತ್ತಿದ್ದಾರೆ. ಮೃತರು ಎಲ್ಲಿಯವರು ಹೆಸರು ಇನ್ನೂ ಪತ್ತೆ ಆಗಿಲ್ಲ.