ಹೊಸ ದಿಗಂತ ವರದಿ, ಮೈಸೂರು:
ಕಾರುಗಳ್ಳನೊಬ್ಬನನ್ನು ಬಂಧಿಸಿರುವ ಮೈಸೂರಿನ ಲಷ್ಕರ್ ಠಾಣೆ ಪೊಲೀಸರು ಆರೋಪಿಯಿಂದ 7 ಲಕ್ಷ ರೂ. ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕು ಬನ್ನಘಟ್ಟ ಗ್ರಾಮದ ಸತೀಶ್ (22) ಬಂಧಿತ ಆರೋಪಿ.
ಕಳೆದ ಫೆ.28ರಂದು ಸಂಜೆ 6 ಗಂಟೆಯ ಸಮಯದಲ್ಲಿ ಗೌತಮ್ ಶೇಖರ್ ಅವರು ಬಟ್ಟೆ ಖರೀದಿಸಲು ತಮ್ಮ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಮನೆಯವರ ಜತೆ ಮೈಸೂರಿನ ಕರ್ನಾಟಕ ಸಿಲ್ಕ್ಸ್ ಗೆ ಬಂದಿದ್ದರು.
ಬಟ್ಟೆ ಖರೀದಿ ನಂತರ ಅಲ್ಲಿಂದ ಸುಮಂಗಲಿ ಸಿಲ್ಕ್ಸ್ ಗೆ ಬಂದು, ಕಾರನ್ನು ಖಾಸಗಿ ಹೋಟೆಲ್ ಮುಂದೆ ನಿಲ್ಲಿಸಿದ್ದರು. ಶಾಪಿಂಗ್ ಮುಗಿಸಿ ಬಂದು ನೋಡಿದಾಗ ಕಾರು ನಾಪತ್ತೆಯಾಗಿತ್ತು. ಗಾಬರಿಗೊಂಡ ಸತೀಶ್, ಈ ಸಂಬoಧ ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅವತ್ತಿನಿಂದಲೇ ಖತರ್ನಾಕ್ ಚೋರನಿಗೆ ಪೊಲೀಸರು ಬಲೆ ಬೀಸಿದ್ದರು.
ತನಿಖೆ ಕೈಗೊಂಡ ಪೊಲೀಸರು ಪಾಂಡವಪುರ ತಾಲ್ಲೂಕು ಮಾದೇಗೌಡನ ಹಳ್ಳಿಯಲ್ಲಿ ಆರೋಪಿ ಸತೀಶನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಾರು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈತನೇ ಇನ್ನೂ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರೋ ಶಂಕೆ ವ್ಯಕ್ತವಾಗಿದೆ. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.