Thursday, July 7, 2022

Latest Posts

ದೇವಸ್ಥಾನ ಹುಂಡಿಗಳ ಕಳವು ಪ್ರಕರಣ : ಇಬ್ಬರು ಆರೋಪಿಗಳ ಬಂಧನ

ಹೊಸ ದಿಗಂತ ವರದಿ, ಚಿತ್ರದುರ್ಗ:

ದೇವಸ್ಥಾನದ ಹುಂಡಿ ಕಳುವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು 7,02,400 ರೂ. ಮೌಲ್ಯದ ಬೆಳ್ಳಿ ವಸ್ತುಗಳು, ಮೋಟಾರ್ ಸೈಕಲ್ ಹಾಗೂ ನಗದು ಹಣ ವಶ ಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಪರಶುರಾಮ್ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಇತ್ತೀಚೆಗೆ ದೇವಾಲಯಗಳ ಕಳುವು ಪ್ರಕರಣ ಹಾಗೂ ಮೋಟಾರ್ ಸೈಕಲ್ ಕಳ್ಳತನ ಹೆಚ್ಚಾಗುತ್ತಿದ್ದು, ಹಿರಿಯೂರಿನ ಶ್ರೀ ತೇರುಮಲ್ಲೇಶ್ವರ ದೇವಸ್ಥಾನ ಮತ್ತು ಹಿರಿಯೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಸ್ಕಲ್ ಗ್ರಾಮದ ಚಿಕ್ಕಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಕಳ್ಳತನವಾಗಿತ್ತು. ಈ ಬಗ್ಗೆ ಹಿರಿಯೂರು ಮತ್ತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು ಎಂದರು.
ನಗರದ ಎಪಿಎಂಸಿಯ ಮಾರುಕಟ್ಟೆ ಮುಂಭಾಗದ ಬಬ್ಬೂರು ಕ್ರಾಸ್ ಬಳಿ ನಂಬರ್ ಪ್ಲೇಟ್ ಇಲ್ಲದ ನೀಲಿ ಮತ್ತು ಕಪ್ಪು ಬಣ್ಣದ ಪಲ್ಸರ್ ಮೋಟಾರ್ ಸೈಕಲ್‌ನಲ್ಲಿ ಬಂದಿದ್ದವರನ್ನು ಹಿಡಿದು ವಿಚಾರಣೆ ಮಾಡಲಾಗಿ ರಮೇಶ್ ಯಾನೆ ರಾಮು ಮತ್ತು ಪ್ರಸಾದ್ ಯಾನೆ ಗುರುಪ್ರಸಾದ್ ಎಂದು ತಿಳಿದುಬಂದಿದೆ. ಆರೋಪಿತರು ಹಿರಿಯೂರು ನಗರ ಠಾಣಾ ವ್ಯಾಪ್ತಿಯ ತೇರುಮಲ್ಲೇಶ್ವರ ದೇವಸ್ಥಾನ ಹಾಗೂ ಹಿರಿಯೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಸ್ಕಲ್‌ನ ಚಿಕ್ಕಮೈಲಾರಲಿಂಗೇಶ್ವರ ದೇವಸ್ಥಾನದ ಬಾಗಿಲು ಮುರಿದು ದೇವಾಲಯದಲ್ಲಿದ್ದ ಬೆಳ್ಳಿ ಆಭರಣ ಮತ್ತು ಹುಂಡಿ ಹೊಡೆದು ಅದರಲ್ಲಿದ್ದ ಹಣವನ್ನು ಕಳ್ಳತನ ಮಾಡಿರುವುದು ತಿಳಿದುಬಂದಿದೆ ಎಂದರು.
ಹಿರಿಯೂರು ಗ್ರಾಮಾಂತರ ಠಾಣಾ ವ್ಯಾಪ್ತಿ, ಮಧುಗಿರಿ ಠಾಣಾ ವ್ಯಾಪ್ತಿ, ಶಿರಾ ನಗರ ಠಾಣಾ ವ್ಯಾಪ್ತಿಯಲ್ಲಿ ಮೋಟಾರ್ ಸೈಕಲ್‌ಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ. ಆರೋಪಿಗಳು ಈ ಹಿಂದೆ ಹೊಸದುರ್ಗದಲ್ಲಿ, ಪರಶುರಾಂಪುರ, ಶ್ರೀರಾಂಪುರ, ಪಾವಗಡ, ಸಿ.ಎಸ್.ಪುರ ಮತ್ತು ಆಂಧ್ರಪ್ರದೇಶದ ಅಮರಾಪುರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 15 ದೇವಸ್ಥಾನದ ಹುಂಡಿ ಕಳುವು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದು, ಇತ್ತೀಚೆಗೆ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
ಮಸ್ಕಲ್ ಗ್ರಾಮದ ಚಿಕ್ಕ ಮೈಲಾರಲಿಂಗೇಶ್ವರ ದೇವಾಲಯದಲ್ಲಿ 1 ಬೆಳ್ಳಿ ಕಿರೀಟ, ಸುಮಾರು 500 ಗ್ರಾಂ ತೂಕದ್ದು, ಅಂದಾಜು ಮೌಲ್ಯ 41,000ರೂ.ಗಳು. 1 ಬೆಳ್ಳಿ ನಾಗಾಭರಣ, ಸುಮಾರು 500 ಗ್ರಾಂ ತೂಕದ್ದು, ಅಂದಾಜು ಮೌಲ್ಯ 41,000 ರೂ.ಗಳು. ಹಿರಿಯೂರಿನ ತೇರುಮಲ್ಲೇಶ್ವರ ದೇವಾಲಯದಲ್ಲಿ 1 ಬೆಳ್ಳಿ ಪ್ರಭಾವಳಿ, ಸುಮಾರು 3 ಕೆ.ಜಿ. ತೂಕದ್ದು, ಅಂದಾಜು ಮೌಲ್ಯ 2,40,000 ರೂ.ಗಳು. 1 ಬೆಳ್ಳಿ ನಾಗಾಭರಣ, ಸುಮಾರು 500 ಗ್ರಾಂ ತೂಕದ್ದು, ಅಂದಾಜು ಮೌಲ್ಯ 41,000 ರೂ.ಗಳು. ಬೆಳ್ಳಿ ಮುಖವಾಡ 500 ಗ್ರಾಂ 41,000 ರೂ.ಗಳು ಹಾಗೂ 17,400 ರೂ. ನಗದು ಹಣ ವಶಪಡಿಸಿಕೊಳ್ಳಲಾಗಿದೆ ಎಂದರು.
ಇದರೊಂದಿಗೆ ಹಿರಿಯೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಬಜಾಜ್ ಪಲ್ಸರ್ ಮೋಟಾರ್ ಸೈಕಲ್, ಮಧುಗಿರಿ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರೋ ಮೋಟಾರ್ ಸೈಕಲ್, ಶಿರಾ ನಗರ ಠಾಣಾ ವ್ಯಾಪ್ತಿಯಲ್ಲಿ ಕಳುವು ಮಾಡಿರುವ ಟಿವಿಎಸ್ ಅಪಾಚೆ ಮೋಟಾರ್ ಸೈಕಲ್‌ನ್ನು ಆರೋಪಿತರಿಂದ ವಶಪಡಿಸಿಕೊಳ್ಳಲಾಗಿದೆ. ಒಟ್ಟು 5 ಕೆ.ಜಿ. ಬೆಳ್ಳಿ, 3 ಮೋಟಾರ್ ಸೈಕಲ್‌ಗಳು, 17,400 ರೂ. ನಗದು ಹಣ ಸೇರಿದಂತೆ ಒಟ್ಟು ಮೌಲ್ಯ 7,02,400 ರೂ.ಗಳು ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss