ವಿ.ವಿ ವಿದ್ಯಾರ್ಥಿಗಳಿಗೆ ಜಾತಿ ಸೂಚಕ ಪ್ರಶ್ನೆ?: ವಿವಾದಕ್ಕೀಡಾದ ಇತಿಹಾಸ ಪರೀಕ್ಷಾ ಪತ್ರಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಮಿಳುನಾಡಿನ ಸೇಲಂನ ಪೆರಿಯಾರ್​ ವಿಶ್ವವಿದ್ಯಾಲಯದ ಮೊದಲ ವರ್ಷದ ಇತಿಹಾಸ ವಿಷಯದ ಪರೀಕ್ಷಾ ಪ್ರಶ್ನೆಪತ್ರಿಕೆಯಲ್ಲಿನ ಬಹು ಆಯ್ಕೆ ಮಾದರಿಯ ಜಾತಿಸೂಚಕ ಪ್ರಶ್ನೆಯೊಂದು ವಿವಾದಕ್ಕೀಡಾಗಿದೆ.ಈ ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾಗಿರುವ ಜಾತಿ ಕುರಿತು ಪ್ರಶ್ನೆಯೊಂದು ಚರ್ಚೆಗೆ ಗ್ರಾಸವಾಗಿದೆ.

ಪರೀಕ್ಷಾ ಪತ್ರಿಕೆಯ 11ನೇ ಪ್ರಶ್ನೆಯು ಜಾತಿ ಸೂಚಕವಾಗಿದ್ದು, “ತಮಿಳುನಾಡಿಗೆ ಸೇರಿದ ಅತಿ ಕೆಳಜಾತಿ ಯಾವುದು?” ಎಂದು ಪ್ರಶ್ನಿಸಲಾಗಿದೆ. ಇದಕ್ಕೆ ಮಹರ್ಸ್​, ನದರ್ಸ್​, ಎಹ್ವಾಸ್​, ಹರ್ಜನ್ಸ್​ ಎಂಬ ನಾಲ್ಕು ಆಯ್ಕೆಗಳನ್ನೂ ನೀಡಲಾಗಿದೆ.

ಈ ಪ್ರಶ್ನೆ ಮಾತ್ರವಲ್ಲದೇ ನೀಡಲಾಗಿರುವ ಆಪ್ಷನ್​ಗಳು ಕೂಡ ಜಾತಿಗಳನ್ನು ಕೀಳಾಗಿ ಕಾಣುವಂತೆ ಮಾಡಿದೆ ಎಂದು ಈಗ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಈ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ವಿವಾದ ಭುಗಿಲೆದ್ದ ಬಳಿಕ ಸ್ಪಷ್ಟನೆ ನೀಡಿರುವ ಪೆರಿಯಾರ್​ ವಿವಿ ಕುಲಪತಿ ಆರ್​.ಜಗನ್ನಾಥ್​, ಇತರ ವಿಶ್ವವಿದ್ಯಾಲಯ ಮತ್ತು ಕಾಲೇಜು ಉಪನ್ಯಾಸಕರು ಪ್ರಶ್ನೆ ಪತ್ರಿಕೆ ಸಿದ್ಧಪಡಿಸುತ್ತಾರೆ. ಈ ಪ್ರಶ್ನೆ ಪತ್ರಿಕೆ ನಮ್ಮ ವಿವಿಯಿಂದ ಸಿದ್ಧಪಡಿಸಲಾಗಿಲ್ಲ. ಆದ್ದರಿಂದ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಪ್ಪಿಸಲು ನಾವು ಪರೀಕ್ಷೆಯ ಮೊದಲು ಪ್ರಶ್ನೆಗಳನ್ನು ಪರಿಶೀಲಿಸುವುದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಮತ್ತು ಮರುಪರೀಕ್ಷೆ ನಡೆಸುವ ಬಗ್ಗೆ ಪರಿಗಣಿಸಲಾಗುವುದು ಎಂದಿದ್ದಾರೆ.

ಉನ್ನತ ಶಿಕ್ಷಣ ಇಲಾಖೆ ಉಪ ಕಾರ್ಯದರ್ಶಿ ಎಂ.ಇಳಂಗೋ ಹೆನ್ರಿ ದಾಸ್ ಅವರ ನೇತೃತ್ವದಲ್ಲಿ ವಿವಾದಾತ್ಮಕ ಪ್ರಶ್ನೆಯ ತನಿಖೆಗಾಗಿ ತಂಡವನ್ನು ರಚಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!