ಹೊಸದಿಗಂತ ವರದಿ, ಶಿರಹಟ್ಟಿ:
ಕಾವೇರಿ ನದಿ ನೀರು ಹಂಚಿಕೆಯಲ್ಲಿ ರಾಜ್ಯದ ರೈತರಿಗೆ ಪದೇ ಪದೇ ಅನ್ಯಾಯವಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಮಧ್ಯ ಪ್ರವೇಶಿಸಿ ರಾಜ್ಯದ ರೈತರಿಗೆ ನ್ಯಾಯ ಕಲ್ಪಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬುಧವಾರ ಆಗ್ರಹಿಸಿ ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದು ವಿನೂತನ ಪ್ರತಿಭಟನೆ ನಡೆಸಿದರು.
ಈ ವೇಳೆ ಸಂಘಟನೆ ಅಧ್ಯಕ್ಷ ಬಸವರಾಜ ವಡವಿ ಮಾತನಾಡಿ. ಮುಂಗಾರು ಮಳೆಯ ಅಭಾವದಿಂದ ರಾಜ್ಯ ಭೀಕರ ಬರ ಪರಿಸ್ಥಿತಿ ಎದುರಿಸುತ್ತಿದೆ. ಕಾವೇರಿ ಕಣಿವೆಯ ಜಲಾಶಯಗಳಲ್ಲಿ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿವೆ, ರಾಜ್ಯ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ದುಸ್ಥಿತಿ ಎದುರಿಸುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರೆಸುತ್ತಿರುವುದು, ರೈತರ ಪಾಲಿಗೆ ನುಂಗಲಾರದ ತುತ್ತಾಗಿದೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯ ಪ್ರವೇಶಿಸಿ ಕರ್ನಾಟಕ, ತಮಿಳುನಾಡು ಮುಖ್ಯಮಂತ್ರಿಗಳು ಹಾಗೂ ಸಂಸದರ ತುರ್ತು ಸಭೆ ನಡೆಸಿ, ನೀರಿನ ವಾಸ್ತು ಸ್ಥಿತಿ ಅವಲೋಕಿಸಿ ಅನ್ಯಾಯ ಸರಿಪಡಿಸಬೇಕೆಂದು ಒತ್ತಾಯಿಸಿದರು.
ಕಾವೇರಿ ನೀರಿಗಾಗಿ ನಾವು ರಕ್ತ ಕೊಟ್ಟೆವು ಆದ್ರೆ ನೀರು ಕೊಡಲು ಸಾಧ್ಯವಿಲ್ಲ. ಕಾವೇರಿ ನದಿ ನೀರು ಹಂಚಿಕೆಗೆ ಸಂಕಷ್ಟ ಸೂತ್ರ ಜಾರಿಗೊಳಿಸಿ, ಒಕ್ಕೂಟ ವ್ಯವಸ್ಥೆ ಬಲಪಡಿಸಲು ಕಾವೇರಿ ಹೋರಾಟಕ್ಕೆ ನ್ಯಾಯ ಒದಗಿಸಿ ಮತ್ತು ರೈತರ ಹಿತದೃಷ್ಟಿಯಿಂದ ರಾಜ್ಯದ 28 ಸಂಸದರ ನಿಯೋಗ ಪ್ರಧಾನಿ ನರೇಂದ್ರ ಮೋದಿ ಬಳಿ ಹೋಗಿ, ಮುಂಗಾರು ಮಳೆಯ ವರದಿ, ನೀರು ಸಂಗ್ರಹದ ವರದಿ ಹಾಗೂ ರಾಜ್ಯದ ಜನರಿಗೆ ಕುಡಿಯಲು ಮತ್ತು ಬೇಸಾಯಕ್ಕೆ ಬೇಕಾದ ನೀರಿನ ಅವಶ್ಯಕತೆ ಎಷ್ಟು ಎಂಬುದನ್ನು ವಿವರಿಸಿ ರಾಜ್ಯದ ಹಿತ ಕಾಪಾಡಲು ಮುಂದಾಗುವಂತೆ ಒತ್ತಾಯಿಸಿದರು.
ಈ ವೇಳೆ ದೇವೇಂದ್ರ ಸಿಂಧೆ, ಇಂತಿಯಾಜ ಪಟ್ವೇಗಾರ, ನೂರ ಅಹ್ಮದ್ ಮುಳಗುಂದ, ಅನ್ವರ ಬರದ್ವಾಡ, ನೂರುಶಾ ಮಕಾನದಾರ, ವಿದ್ಯಾದರು ಮರಬದ, ಹಸನಲ್ಲಿ ಮನಿಯರ, ಮುಸ್ತಫಾ ಸಂಶಿ, ತನ್ವೀರ ಬುವಾಜಿ, ಮಲ್ಲಿಕಾರ್ಜುನ ಫೀಲ್ಗಿ ಮಠ, ಕೈಫ್ ಢಾಲಾಯತ ಉಪಸ್ಥಿತರಿದ್ದರು