ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾ ಸೆನ್ಸಾರ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿರುವುದಾಗಿ ತಮಿಳು ನಟ ಆರೋಪದ ತನಿಖೆಯನ್ನು ಸಬಿಐ ವಹಿಸಿಕೊಂಡಿದೆ. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್(CBFC) ಸೇರಿದಂತೆ ಮೂವರು ವ್ಯಕ್ತಿಗಳ ವಿರುದ್ಧ ಭ್ರಷ್ಟಾಚಾರದ ಆರೋಪದ ಮೇಲೆ ಕೇಂದ್ರೀಯ ತನಿಖಾ ದಳವು ಪ್ರಕರಣ ದಾಖಲಿಸಿದೆ.
ಸಿಬಿಐ ತನಿಖೆಯಲ್ಲಿ ಹೆಸರಿಸಲಾದ ಮೂವರು ಖಾಸಗಿ ವ್ಯಕ್ತಿಗಳಲ್ಲಿ ಮೆರ್ಲಿನ್ ಮೆನಗಾ, ಜೀಜಾ ರಾಮದಾಸ್ ಮತ್ತು ರಾಜನ್ ಎಂ. ಸೇರಿದ್ದಾರೆ. ಚೆನ್ನೈ ಮೂಲದ ನಟ ಮತ್ತು ನಿರ್ಮಾಪಕ ವಿಶಾಲ್ ತಮ್ಮ ‘ಮಾರ್ಕ್ ಆಂಟನಿ’ ಚಿತ್ರದ ಹಿಂದಿ ಆವೃತ್ತಿಯ ಪ್ರದರ್ಶನ ಮತ್ತು ಪ್ರಮಾಣೀಕರಣಕ್ಕಾಗಿ 6.50 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದ ಬಳಿಕ ಈ ಬೆಳವಣಿಗೆಯಾಗಿದೆ.
ಈ ಕುರಿತು ಸೆಪ್ಟೆಂಬರ್ 29ರಂದು ನಟ ವಿಶಾಲ್ ತಮ್ಮ ಟ್ವಿಟ್ಟರ್‌ನಲ್ಲಿ ಸಂದೇಶವೊಂದನ್ನು ಹಾಕಿದ್ದರು. “ಭ್ರಷ್ಟಾಚಾರವನ್ನು ಸಿನಿಮಾದಲ್ಲಿ ತೋರಿಸುವುದು ಒಳ್ಳೆಯದು. ಆದರೆ ನಿಜ ಜೀವನದಲ್ಲಿ ಅಲ್ಲ, ಅದನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ವಿಶೇಷವಾಗಿ ಸರ್ಕಾರಿ ಕಚೇರಿಗಳಲ್ಲಿ #CBFC ಮುಂಬೈ ಕಚೇರಿಯಲ್ಲಿ ಇನ್ನೂ ಕೆಟ್ಟದಾಗಿ ನಡೆಯುತ್ತಿದೆ. ನನ್ನ #MarkAntonyHindi ಆವೃತ್ತಿಗೆ 6.5 ಲಕ್ಷ ಲಂಚ ಕೇಳಿದರು” ಪೋಸ್ಟ್ ಮಾಡಿದ್ದರು.
ಈ ಪೋಸ್ಟ್ ದೊಡ್ಡ ಸಂಚಲನವನ್ನೇ ಉಂಟು ಮಾಡಿದ್ದು, ಈ ಬಗ್ಗೆ ಸೆನ್ಸಾರ್ ಮಂಡಳಿ ಕೂಡ ಪ್ರತಿಕ್ರಿಯಿಸಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಆರೋಪಿಗಳು ಯಾರೇ ಆಗಿದ್ದರು ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಬಿಎಫ್‌ಸಿ ಹೇಳಿತ್ತು. ಅಷ್ಟೇ ಅಲ್ಲದೆ, ಲಂಚ ಕೇಳಿದವರು ನಮ್ಮವಾಗಿರುವುದಿಲ್ಲ, ಯಾರೋ ಬಾಹ್ಯ ವ್ಯಕ್ತಿ ಎಂದೂ ತಿಳಿಸಿತ್ತು. ಇದೀಗ ಈ ವಿಚಾರ ಕುರಿತಂತೆ ಸಿಬಿಐ ತನಿಖೆ ನಡೆಸಲಿದೆ.