Friday, July 1, 2022

Latest Posts

ಕುಟ್ಟಂದಿಯಲ್ಲಿ ಯುವಕನ ಸಾವಿಗೆ ಸೆಸ್ಕ್ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ: ಕೊಲ್ಲಿರ ಬೋಪಣ್ಣ

ಹೊಸದಿಗಂತ ವರದಿ, ಪೊನ್ನಂಪೇಟೆ:

ಬಿ.ಶೆಟ್ಟಿಗೇರಿಯ ಕುಟ್ಟಂದಿ ಗ್ರಾಮದಲ್ಲಿ ಡಿ.16ರಂದು ಯುವಕ ನಾಮೇರ ದಿಶನ್ ದೇವಯ್ಯ (22) ಅವರು ವಿದ್ಯುತ್ ತಂತಿ ತಗುಲಿ ಸಾವಿಗೀಡಾಗಿದ್ದು, ಇದಕ್ಕೆ ಸೆಸ್ಕ್ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ಕಾರಣವಾಗಿದೆ ಎಂದು ವೀರಾಜಪೇಟೆ ತಾಲೂಕು ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ಹಾಗೂ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಸದಸ್ಯ ಕೊಲ್ಲಿರ ಬೋಪಣ್ಣ ಆರೋಪಿಸಿದ್ದಾರೆ.
ಇಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಬಂಧಿಸಿದ ಮಾರ್ಗವನ್ನು ತೋಟ- ಗದ್ದೆಯಿಂದ ರಸ್ತೆ ಬದಿಗೆ ಸ್ಥಳಾಂತರಿಸಲು ಹಲವು ಬಾರಿ ಮನವಿ ನೀಡಿದ್ದರೂ, ಇಲಾಖಾಧಿಕಾರಿಗಳು ಸ್ಪಂದಿಸಲಿಲ್ಲ ಎಂದು ದೂರಿದರಲ್ಲದೆ, ಸಾವಿಗೀಡಾದ ಯುವಕನ ಕುಟುಂಬಕ್ಕೆ ಕನಿಷ್ಡ 50 ಲಕ್ಷ ರೂ.ಪರಿಹಾರ ನೀಡಬೇಕು ಹಾಗೂ ಸಹೋದರನಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಮುಂದೆ ಇಂತಹ ದುರ್ಘಟನೆ ನಡೆಯದಂತೆ ಒಂದು ತಿಂಗಳೊಳಗೆ ವಿದ್ಯುತ್ ಮಾರ್ಗವನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.
ಸೆಸ್ಕ್ ಅಧಿಕಾರಿಗಳು ಇದಕ್ಕೆ ಸ್ಪಂದಿಸದಿದ್ದರೆ ಯುವಕನ ಕುಟುಂಬಕ್ಕೆ ಪರಿಹಾರ ಹಾಗೂ ಮಾರ್ಗ ಬದಲಾವಣೆಗೆ ಮತ್ತು ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ದಾಖಲಿಸುವುದಾಗಿ ಬೋಪಣ್ಣ ಎಚ್ಚರಿಸಿದರು.
ಬಿ. ಶೆಟ್ಟಿಗೇರಿ ಹಾಗೂ ಕುಟ್ಟಂದಿ ಗ್ರಾಮದಲ್ಲಿ ಹಾದುಹೋಗಿರುವ 11 ಕೆವಿ ವಿದ್ಯುತ್ ಮಾರ್ಗವನ್ನು ರಸ್ತೆ ಬದಿಗೆ ಸ್ಥಳಾಂತರಿಸಲು ಎರಡು ವರ್ಷಗಳಿಂದ ನಿರಂತರವಾಗಿ ಸೆಸ್ಕ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಬಿ. ಶೆಟ್ಟಿಗೇರಿ ಗ್ರಾಮ ಸಭೆಯಲ್ಲಿ ಈ ಬಗ್ಗೆ ಒತ್ತಾಯಿಸಲಾಗಿ ಸಭೆಯಲ್ಲಿದ್ದ ಸೆಸ್ಕ್ ಕಿರಿಯ ಇಂಜಿನಿಯರ್ ಅವರು ಒಂದು ತಿಂಗಳೊಳಗೆ ಮಾರ್ಗ ಬದಲಾಯಿಸುವ ಭರವಸೆ ನೀಡಿದ್ದರು. ಇದಲ್ಲದೆ ಕಳೆದ ಫೆ. 22ರಂದು ಗ್ರಾಮ ಪಂಚಾಯಿತಿಯಿಂದ ಲಿಖಿತವಾಗಿ ವೀರಾಜಪೇಟೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೂ ಮನವಿ ಸಲ್ಲಿಸಲಾಗಿದೆ. ಅಲ್ಲದೆ ಅಕ್ಟೋಬರ್ 25ರಂದು ಮಡಿಕೇರಿ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯ ಎದುರು ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭವೂ ಈ ವಿಚಾರ ಪ್ರಸ್ತಾಪ ಮಾಡಿ ತೋಟದಲ್ಲಿ ಕಾಳುಮೆಣಸು ಕುಯ್ಲು, ನೀರಾವರಿ ಕೆಲಸ, ತೋಟದ ಕಾರ್ಯಚಟುವಟಿಕೆ, ಮರ ಕಪಾತು ಇತ್ಯಾದಿ ಸಂದರ್ಭ ತುಂಬಾ ಹಳೆಯ, ಶಿಥಿಲಾವಸ್ಥೆಯ ಮತ್ತು ಜೋತುಬಿದ್ದಿರುವ ವಿದ್ಯುತ್ ಮಾರ್ಗದಿಂದ ಕಾರ್ಮಿಕರು ಹಾಗೂ ಬೆಳೆಗಾರರಿಗೆ ಅಪಾಯವಿರುವ ಬಗ್ಗೆ ಗಮನ ಸೆಳೆಯಲಾಗಿದೆ. ಈ ಸಂದರ್ಭ ಗರಿಷ್ಠ ಒಂದು ತಿಂಗಳೊಳಗೆ ಮಾರ್ಗ ಸ್ಥಳಾಂತರಿಸುವುದಾಗಿ ವೀರಾಜಪೇಟೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸುರೇಶ್ ಅವರು ಭರವಸೆ ನೀಡಿದ್ದರು.
ಇದಕ್ಕೂ ಮೊದಲು ಅಭಿಯಂತರ ಸುರೇಶ್ ಅವರಿಗೆ ಹಲವು ಬಾರಿ ವೀರಾಜಪೇಟೆ ಕಚೇರಿಯಲ್ಲಿ ಮನವಿ ಸಲ್ಲಿಸಲಾಗಿದೆ. ಈ ಹಿಂದೆ ಇದ್ದ ವೀರಾಜಪೇಟೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪಾಟೀಲ್ ಅವರಿಗೂ ಮನವಿ ಸಲ್ಲಿಸಿದ ಸಂದರ್ಭ ಅವರು ಮಾರ್ಗ ಸ್ಥಳಾಂತರಕ್ಕೆ ಕ್ರಿಯಾ ಯೋಜನೆಯನ್ನು ತಯಾರಿಸಿದ್ದರು. ಆದರೆ, ಅವರು ಕೆಲವೇ ಸಮಯದಲ್ಲಿ ವರ್ಗಾವಣೆಗೊಂಡ ನಂತರ ಸುರೇಶ್ ಅವರು ಅಧಿಕಾರ ವಹಿಸಿಕೊಂಡು ಮಾರ್ಗವನ್ನು ಬದಲಾಯಿಸುವ ನಿಟ್ಟಿನಲ್ಲಿ ಸೂಕ್ತವಾಗಿ ಸ್ಪಂದಿಸಲಿಲ್ಲ ಎಂದು ಬೋಪಣ್ಣ ದೋಷಾರೋಪಿಸಿದರು.
ಬೋಪಣ್ಣ ಅವರು ಈ ಸಂದರ್ಭ ತಮ್ಮಲ್ಲಿರುವ ಅಧಿಕಾರಿಗಳಿಗೆ ನೀಡಿದ ಮನವಿ ಪತ್ರ ಹಾಗೂ ಅಧಿಕಾರಿಗಳು ನೀಡಿದ ಭರವಸೆಯ ವಿಡಿಯೋವನ್ನು ಗೋಷ್ಠಿಯಲ್ಲಿ ಪ್ರದರ್ಶಿಸಿದರು.
ಬಾಳಿ ಬದುಕಬೇಕಾಗಿದ್ದ ಯುವಕ ದಿಶನ್ ದೇವಯ್ಯ ಅವರ ಮರಣಕ್ಕೆ ವೀರಾಜಪೇಟೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸುರೇಶ್ ಮತ್ತು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ಅವರು ನೇರ ಹೊಣೆಯಾಗಿದ್ದಾರೆ ಎಂದು ಬೋಪಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಚೇರಂಡ ಮೋಹನ್, ಅನು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss