Thursday, July 7, 2022

Latest Posts

ಸಂಭ್ರಮ, ಸಡಗರದ ಶರಣ ಸಂಸ್ಕೃತಿ ಉತ್ಸವ, ಜಾನಪದ ಕಲಾಮೇಳ

ಹೊಸ ದಿಗಂತ ವರದಿ,ಚಿತ್ರದುರ್ಗ:

ಐತಿಹಾಸಿಕ ನಗರ ಚಿತ್ರದುರ್ಗವು ಪ್ರತಿ ವರ್ಷದಂತೆ ಈ ವರ್ಷವೂ ಶರಣ ಸಂಸ್ಕೃತಿ ಉತ್ಸವ ಅನೇಕ ವಿಶೇಷಗಳಿಗೆ ಸಾಕ್ಷಿಯಾಯಿತು. ಕಳೆದ ೮ನೇ ತಾರೀಖಿನಿಂದ ನಡೆಯುತ್ತಿರುವ ಉತ್ಸವ ಶುಕ್ರವಾರ ಮತ್ತೊಂದು ವಿಶೇಷತೆಗೆ ಕಾರಣವಾಯಿತು. ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ನೇತೃತ್ವದಲ್ಲಿ ಅದ್ಧೂರಿ ಜನಪದ ಜಾತ್ರೆಯೇ ನಡೆಯಿತು. ಸಹಸ್ರಾರು ಭಕ್ತಸಮೂಹ ಈ ಸನ್ನಿವೇಶವನ್ನು ಕಣ್ತುಂಬಿಕೊಂಡರು.
ಮುರುಘಾ ಶರಣರು ಮುರುಗಿ ಶಾಂತವೀರ ಸ್ವಾಮಿಗಳ ಗದ್ದುಗೆಯ ದರ್ಶನ ಪಡೆದು ಶ್ರೀಮಠದ ಪ್ರಾಂಗಣದಲ್ಲಿ ಸಿಂಗರಿಸಿದ್ದ ಪುಷ್ಪಾಲಂಕೃತ ವಾಹನದ ಕಡೆ ಸಾಗಿ ನಾಡಿನ ನಾನಾ ಮಠಗಳ ಸ್ವಾಮಿಗಳು, ಬಸವ ಭಕ್ತರು, ಸಾರ್ವಜನಿಕರು, ಕಲಾವಿದರು, ಜನಪ್ರತಿನಿಧಿಗಳ ಹರ್ಷೋಧ್ಘಾರಗಳ ನಡುವೆ ವಾಹನವನ್ನು ಏರಿದರು. ಜನಪದ ಕಲಾಮೇಳಕ್ಕೆ ಕನಕಪುರ ಶ್ರೀ ಮರಳೇ ಗವಿಮಠದ ಡಾ.ಶ್ರೀ ಮುಮ್ಮಡಿ ಶಿವರುದ್ರ ಸ್ವಾಮಿಗಳು ಉತ್ಸವಕ್ಕೆ ಚಮ್ಮಾಳ ಬಾರಿಸುವ ಮೂಲಕ ಚಾಲನೆ ನೀಡಿದರು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ವಿವಿಧ ಪ್ರಕಾರದ ಜಾನಪದ ಕಲಾತಂಡಗಳು ತಮ್ಮದೇ ಆದ ವಿಶಿಷ್ಟ ಭಂಗಿಯ ಪ್ರದರ್ಶನ ನೀಡುತ್ತಾ ಸಾಗಿದ ದೃಶ್ಯ ಸುಮಾರು ಎರಡು ಕಿ.ಮೀ.ನಷ್ಟು ಉದ್ದ ಸಾಗಿತು. ಚಂಡೆವಾದನ ಬಳಗ, ಖಾಸಾ ಬೇಡರ ಪಡೆ, ಜಟ್ಟಿ ವೀರಭದ್ರ ಕುಣಿತ, ಯಕ್ಷಗಾನ ಗೊಂಬೆಗಳು, ಭರ್ಜಿ ಕುಣಿತ, ಮಹಿಳೆಯರ ತಮಟೆ ವಾದ್ಯ ತಂಡ, ಪೋತರಾಜರ ಕುಣಿತ, ಛತ್ರಿ ಕುಣಿತ, ಹರಿಗೆ ಕುಣಿತ, ಬೆಂಕಿ ಕರಗ, ಉರುಮೆ, ಪುರುಷರ ಮತ್ತು ಮಹಿಳೆಯರ ನಾಸಿಕ್ ಡೋಲು, ಪಟ ಕುಣಿತ, ಪೂಜಾ ಕುಣಿತ ಹೀಗೆ ಹತ್ತು ಹಲವು ಕಲಾ ತಂಡಗಳು ಮೆರವಣಿಗೆಯಲ್ಲಿ ಪ್ರದರ್ಶನ ನೀಡಿದವು.
ಈ ಮೇಳದಲ್ಲಿ ಧಾರ್ಮಿಕ, ಐತಿಹಾಸಿಕ ಪುಣ್ಯಪುರುಷರ ಸ್ತಬ್ದಚಿತ್ರಗಳೊಂದಿಗೆ ಪರಿಸರ ಸ್ವಚ್ಛತೆಜಾಗೃತಿ ಸ್ತಬ್ಧ ಚಿತ್ರಗಳು, ಸೋಲಾರ್ ಗ್ರೀನ್ ಹೌಸ್, ಕೋವಿಡ್-೧೯ ಅಭಿಯಾನ ಮಾದರಿ, ಮಳೆನೀರು ಕೊಯ್ಲು, ಮರುಘಾ ಶರಣರಿಂದ ಅನಾಥ ಮಕ್ಕಳ ಪೋಷಣೆ, ನಿಫಾ ವೈರಸ್, ಒಂಟಿಕಲ್ಲು ಬಸವಣ್ಣ, ಕರೋನಾ ಸಂಕಷ್ಟದಲ್ಲಿ ಮುರುಘಾ ಶರಣರು ಅಹಾರ ಕಿಟ್ ವಿತರಣೆ, ಕೋವಿಡ್ ವ್ಯಾಕ್ಸಿನೇಷನ್ ಕುರಿತಾದ ಸ್ತಬ್ಧಚಿತ್ರಗಳು ಜನರನ್ನು ಆಕರ್ಷಿಸಿದವು. ಜನರು ರಸ್ತೆ ಬದಿಯಲ್ಲಿ, ಮನೆಯ ಮಹಡಿಗಳ ಮೇಲೆ ನಿಂತು ಮೆರವಣಿಗೆ ವೀಕ್ಷಿಸಿ ಖುಷಿಪಟ್ಟರು.
ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್ ಶ್ರೀಗಳಿಗೆ ಬೃಹತ್ ಹೂವಿನ ಹಾರವನ್ನು ಜೆ.ಸಿ.ಬಿ. ಮೂಲಕ ಹಾಕಿ ಭಕ್ತಿ ಸಮರ್ಪಿಸಿದರು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಪುತ್ರ ಡಾ.ಸಿದ್ದಾರ್ಥ್ ಗುಂಡಾರ್ಪಿ ಶರಣರಿಗೆ ಹೂವಿನ ಹಾರ ಹಾಕಿ ಆಶೀರ್ವಾದ ಪಡೆದರು. ಉತ್ಸವ ವೀಕ್ಷಣೆಗೆ ಜನ ಸಾಲುಗಟ್ಟಿ ನಿಂತಿದ್ದರು. ದಣಿದ ಕಲಾವಿದರಿಗೆ ನೀರು, ಪಾನಕ, ಮಜ್ಜಿಗೆ, ಲಘು ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಉತ್ಸವದಲ್ಲಿ ಸಾಗಿ ಬರುತ್ತಿದ್ದ ಶರಣರ ವಾಹನ ಬಳಿ ಬಂದ ಭಕ್ತರು ಫಲಪುಷ್ಪ ಕಾಣಿಕೆಗಳನ್ನು ನೀಡುತ್ತ ಗೌರವ ಸಲ್ಲಿಸಿ ಶ್ರೀಗಳ ಆಶೀರ್ವಾದ ಪಡೆದರು.
ಶ್ರೀಗಳ ವಾಹನ ಮಧ್ಯಾಹ್ನ ೨ ಗಂಟೆ ಸುಮಾರಿಗೆ ನಗರದ ಗಾಂಧೀ ವೃತ್ತದ ಬಳಿ ಬಂದಾಗ ಹೆಲಿಕ್ಯಾಪ್ಟರ್ ಮೂಲಕ ಪುಷ್ಪವೃಷ್ಟಿಯ ಮೂಲಕ ಶ್ರೀಗಳಿಗೆ ಗೌರವ ಸಲ್ಲಿಸಲಾಯಿತು. ನೆರೆದಿದ್ದ ಜನರು ಈ ಸನ್ನಿವೇಶವನ್ನು ಕಂಡು ಜೈಕಾರ ಹಾಕುತ್ತ ಸಂಭ್ರಮಿಸಿದರು. ಶ್ರೀಮಠದಿಂದ ಹೊರಟ ಉತ್ಸವ ರಾಷ್ಟ್ರೀಯ ಹೆದ್ದಾರಿ ೪, ಬಿ.ಡಿ.ರಸ್ತೆ, ನಗರದ ಪ್ರಮುಖ ರಾಜಬೀದಿಗಳಾದ ಸಂತೆಪೇಟೆ ವೃತ್ತ, ಮೈಸೂರು ಬ್ಯಾಂಕ್ ವೃತ್ತ, ಬಸವಮಂಟಪ ರಸ್ತೆ, ರಂಗಯ್ಯನ ಬಾಗಿಲು, ದೊಡ್ಡಪೇಟೆ ಮೂಲಕ ಕೋಟೆಯ ಮೇಲುದುರ್ಗಕ್ಕೆ ಸಾಗಿ ಅಂತ್ಯಗೊಂಡಿತು.
ಶರಣ ಸಂಸ್ಕೃತಿ ಉತ್ಸವದ ಗೌರವಾಧ್ಯಕ್ಷರಾದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಹೆಬ್ಬಾಳು ವಿರಕ್ತ ಮಠದ ಮಹಾಂತರುದ್ರೇಶ್ವರ ಸ್ವಾಮೀಜಿ, ವಿವಿಧ ಮಠಾಧೀಶರು, ಶರಣ ಸಂಸ್ಕೃತಿ ಉತ್ಸವದ ಕಾರ್ಯಾಧ್ಯಕ್ಷ ಕೆ.ಎಸ್.ನವೀನ್‌ಮ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮುಂಚೂಣಿಯಲ್ಲಿ ಶ್ರೀಗಳ ಮೆರವಣಿಗೆಗೆ ಸಾಥ್ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss