ಜನಗಣತಿ ಸಂದರ್ಭ ಮಾತೃಭಾಷೆ ನಮೂದಿಸುವಂತಾಗಲಿ: ಬೇಳೂರು ಸುದರ್ಶನ

ಹೊಸ ದಿಗಂತ ವರದಿ , ಮಡಿಕೇರಿ:

ಮುಂದಿನ ಜನಗಣತಿ ಸಂದರ್ಭದಲ್ಲಿ ಭಾಷೆ ಕಲಂನಲ್ಲಿ ಕನ್ನಡದ ಜೊತೆಗೆ ತಾವು ಮಾತನಾಡುವ ಮಾತೃ ಭಾಷೆಯನ್ನು ನಮೂದಿಸುವಂತಾಗಬೇಕು ಎಂದು ಸರ್ಕಾರದ ಇ-ಆಡಳಿತ ವಿಭಾಗದಲ್ಲಿ ಮುಖ್ಯಮಂತ್ರಿ ಅವರ ಸಲಹೆಗಾರರಾಗಿರುವ ಬೇಳೂರು ಸುದರ್ಶನ ಅವರು ಸಲಹೆ ಮಾಡಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಭಾರತೀಯ ವಿದ್ಯಾಭವನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಡಿಜಿಟಲ್ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆ್ಯಪ್ ಆಧಾರಿತ ಗಣತಿ ಮಾಡುವ ಬಗ್ಗೆ ಚಿಂತನೆಗಳು ನಡೆಯುತ್ತಿವೆ. ಆ ನಿಟ್ಟಿನಲ್ಲಿ ಭಾಷೆ ಕಲಂ ನಲ್ಲಿ ಅರೆಭಾಷೆಯನ್ನು ನಮೂದಿಸುವಂತಾಗಬೇಕು ಎಂದರು.
ಹತ್ತು ಸಾವಿರಕ್ಕೂ ಹೆಚ್ಚು ಜನರು ಮಾತನಾಡುವ ಭಾಷೆಯನ್ನು ಎಲ್ಲಾ ಕ್ಷೇತ್ರಗಳಲ್ಲಿ ಪರಿಗಣಿಸುವಂತಾಗಬೇಕು. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಜೀವ ಮತ್ತು ಭಾಷಾ ವೈವಿಧ್ಯತೆ ಜೊತೆಗೆ ಆಧುನಿಕ ಯುಗದಲ್ಲಿ ಡಿಜಿಟಲ್ ವೈವಿಧ್ಯತೆಯನ್ನು ಬಳಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಇದರಿಂದ ಪುಸ್ತಕ ಓದುಗರಿಗೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.

ಭಾಷಾ ವೈವಿಧ್ಯತೆ ಉಳಿಯಲಿ
ರಾಷ್ಟ್ರದ ಈಶಾನ್ಯ ಹಾಗೂ ಪಶ್ಚಿಮ ಮತ್ತು ಪೂರ್ವ ಕರಾವಳಿ ಭಾಗದಲ್ಲಿ ಸಾಕಷ್ಟು ಭಾಷೆಗಳನ್ನು ಕಾಣಬಹುದು. ಆ ನಿಟ್ಟಿನಲ್ಲಿ ಭಾಷಾ ವೈವಿಧ್ಯತೆಯನ್ನು ಉಳಿಸಿಕೊಂಡು ಹೋಗಬೇಕು.ಅರೆಭಾಷೆ, ಕೊಡವ, ತುಳು, ಕೊಂಕಣಿ, ಬ್ಯಾರಿ ಹೀಗೆ ರಾಜ್ಯದಲ್ಲಿ ಐದು ಭಾಷಾ ಅಕಾಡೆಮಿಗಳನ್ನು ಸರಕಾರ ಸ್ಥಾಪಿಸಿರುವುದು ವಿಶೇಷವಾಗಿದೆ. ಆ ನಿಟ್ಟಿನಲ್ಲಿ ಅರೆಭಾಷೆಗೆ ಐಎಸ್‍ಒ ಕೋಡ್ ಪಡೆಯಲು ಮತ್ತಷ್ಟು ಶ್ರಮಿಸಬೇಕಿದೆ ಎಂದು ಬೇಳೂರು ಸುದರ್ಶನ ಅವರು ಹೇಳಿದರು.
ಕನ್ನಡ ಭಾಷಾ ಜಾಲತಾಣಗಳಲ್ಲಿ ಏಕರೂಪತೆ ಇರಬೇಕು ಎಂಬ ಉದ್ದೇಶದಿಂದ ಹಲವು ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ. ಪುಸ್ತಕಗಳ ಡಿಜಿಟಲೀಕರಣದಿಂದ ಯಾರು ಎಲ್ಲಿ ಬೇಕಾದರೂ ತಮಗೆ ಬೇಕಾದ ಪುಸ್ತಕಗಳನ್ನು ಅಧ್ಯಯನ ಮಾಡಬಹುದಾಗಿದೆ ಎಂದು ಅವರು ವಿವರಿಸಿದರು.
ಡಿಜಿಟಲೀಕರಣ
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀ ನಾರಾಯಣ ಕಜೆಗದ್ದೆ ಅವರು ಮಾತನಾಡಿ, ಅರೆಭಾಷೆ ಅಕಾಡೆಮಿಯಿಂದ ಹೊರತಂದಿರುವ ಪುಸ್ತಕಗಳು ಎಲ್ಲರಿಗೂ ತಲುಪುವಂತಾಗುವ ನಿಟ್ಟಿನಲ್ಲಿ ಪುಸ್ತಕಗಳ ಡಿಜಿಟಲೀಕರಣ ಮಾಡಲಾಗಿದೆ. ಪುಸ್ತಕಗಳು ಸಿಗುತ್ತಿಲ್ಲ ಎಂಬ ಭಾವನೆ ಯಾರಲ್ಲೂ ಬರಬಾರದು ಎಂಬ ಉದ್ದೇಶದಿಂದ ಆಧುನಿಕತೆಗೆ ಒಗ್ಗಿಕೊಂಡು ಅಕಾಡೆಮಿಯ ಹಲವು ಪುಸ್ತಕಗಳ ಡಿಜಿಟಲೀಕರಣ ಮಾಡಲಾಗಿದೆ ಎಂದರು.
ಮುಂದಿನ 3 ತಿಂಗಳಲ್ಲಿ ಶಬ್ದಕೋಶ/ನಿಘಂಟು, ಪಾರಂಪರಿಕ ವಸ್ತುಕೋಶ ಸೇರಿದಂತೆ ಇತರ ಎಂಟು ಪುಸ್ತಕಗಳು ಬಿಡುಗಡೆಗೆ ಬಾಕಿ ಇದೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿದೆ ಎಂದು ಲಕ್ಷ್ಮೀ ನಾರಾಯಣ ಕಜೆಗದ್ದೆ ಅವರು ವಿವರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್   ಮಾತನಾಡಿದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಮೈಸೂರು ಕೊಡಗು ಗೌಡ ಸಮಾಜದ ಅಧ್ಯಕ್ಷ ತೋಟಂಬೈಲು ಮನೋಹರ್ ಮಾತನಾಡಿದರು.
ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಸ್ಮಿತಾ ಅಮೃತರಾಜ್, ಚೊಕ್ಕಾಡಿ ಪ್ರೇಮಾ ರಾಘವಯ್ಯ, ಧನಂಜಯ ಅಗೋಳಿಕಜೆ, ಡಾ.ಕೂಡಕಂಡಿ ದಯಾನಂದ, ಭರತೇಶ್ ಅಲಸಂಡೆಮಜಲು, ರಿಜಿಸ್ಟ್ರಾರ್ ಚಿನ್ನಸ್ವಾಮಿ ಮತ್ತಿತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!