ಹೊಸದಿಗಂತ ವರದಿ, ಮಂಗಳೂರು:
ವೀರಶೈವ ಪಂಚಮಸಾಲಿ ಸಮುದಾಯ ಸೇರಿದಂತೆ ಕೆಲವು ಪ್ರಭಾವಿ ಸಮುದಾಯಗಳು ಪ್ರವರ್ಗ 2(ಎ)ಗೆ ತಮ್ಮನ್ನು ಸೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸರ್ಕಾರ ಯಾವುದೇ ಕಾರಣಕ್ಕೂ ಇದಕ್ಕೆ ಮಣಿಯಬಾರದು ಎಂದು ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಗೌರವಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಒಂದು ವೇಳೆ ಸರ್ಕಾರ ಬಲಿಷ್ಠರ ನ್ಯಾಯಬದ್ಧವಲ್ಲದ ಒತ್ತಾಯಕ್ಕೆ ಮಣಿದರೆ ಅತಿ ಹಿಂದುಳಿದ ವರ್ಗದವರಾದ ೧೦೨ ಜಾತಿವರ್ಗಗಳು ಸಂಘಟಿತವಾಗಿ ರಾಜ್ಯಾದ್ಯಂತ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಅತಿ ಹಿಂದುಳಿದ, ದನಿ ಇಲ್ಲದವರು ಇರುವ ಪ್ರವರ್ಗ 2 (ಎ)ಗೆ ಬಲಿಷ್ಠರನ್ನು ಸೇರಿಸುವಂತಹ ಪ್ರಯತ್ನಕ್ಕೆ ಸರ್ಕಾರ ಕೈ ಹಾಕಬಾರದು. ಈಗಾಗಲೇ ನಡೆಸಿರುವ ಜಾತಿವಾರು ಸಮೀಕ್ಷೆಯ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು. ಈ ಬಗ್ಗೆ ಸರ್ಕಾರ ನೇಮಿಸಿದ ಉನ್ನತ ಮಟ್ಟದ ಸಮಿತಿಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು.