ಹೊಸದಿಗಂತ ಆನ್ ಲೈನ್ ಡೆಸ್ಕ್:
ದೇಶದಲ್ಲಿ ಮತ್ತೆ ಕೊರೋನಾ ಅಟ್ಟಹಾಸಗೈಯ್ಯಲಾರಂಭಿಸಿರುವ ಹಿನ್ನೆಲೆಯಲ್ಲಿ ಕೊರೋನಾ ನಿಯಂತ್ರಕ ಲಸಿಕೆ ಕೊವಾಕ್ಸಿನ್ನ ಉತ್ಪಾದನಾ ಸಾಮರ್ಥ್ಯವನ್ನು ಮುಂದಿನ ಸೆಪ್ಟೆಂಬರ್ ಒಳಗೆ ತಿಂಗಳಿಗೆ 100 ಮಿ.ಡೋಸ್ಗಳಿಗೆ ಹೆಚ್ಚಿಸಲಾಗುವುದು ಎಂದು ಕೇಂದ್ರ ಸರಕಾರ ಶುಕ್ರವಾರ ಘೋಷಿಸಿದೆ.
ದೇಶದಲ್ಲೀಗ ತಿಂಗಳಿಗೆ 10 ಮಿ.ಡೋಸ್ ಲಸಿಕೆ ಉತ್ಪಾದನೆಯಾಗುತ್ತಿದೆ. ಅದನ್ನು ಮೇ-ಜೂನ್ ತಿಂಗಳಿಗೆ ದುಪ್ಪಟ್ಟುಗೊಳಿಸಲಾಗುವುದು. ಜುಲೈ-ಆಗಸ್ಟ್ ವೇಳೆಗೆ ಇದು 6-7ಪಟ್ಟು ಅಂದರೆ 60-70 ಮಿ.ಡೋಸ್ಗೆ ಹೆಚ್ಚಾಗಲಿದೆ.ಮುಂಬರುವ ತಿಂಗಳಲ್ಲಿ ಹಲವು ಪಟ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಸೆಪ್ಟೆಂಬರ್ನೊಳಗೆ ಇದನ್ನು ತಿಂಗಳಿಗೆ 100 ಮಿಲಿಯ ಡೋಸ್ಗೆ ಏರಿಸಲಾಗುವುದು. ಲಸಿಕೆ ಉತ್ಪಾದಕ ಸಂಸ್ಥೆಗಳಿಗೆ ಇದಕ್ಕೆ ಅಗತ್ಯವಿರುವ ಹಣಕಾಸು ಬೆಂಬಲವನ್ನೂ ನೀಡಲಾಗುವುದು ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಮೂಲಗಳು ತಿಳಿಸಿವೆ.
ಈಗ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಅಭಿವೃದ್ಧಿಪಡಿಸಿದ ಕೊವಾಕ್ಸಿನ್ನನ್ನು ದೇಶಾದ್ಯಂತ ಲಸಿಕೆ ಅಭಿಯಾನದಲ್ಲಿ ಬಳಸಲಾಗುತ್ತಿದೆ. ಕೆಲವು ವಾರಗಳ ಹಿಂದೆ ಅಂತರ್ಸಚಿವಾಲಯಗಳ ತಂಡವೊಂದು ಎರಡೂ ಲಸಿಕೆಗಳ ಉತ್ಪಾದನಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿತ್ತು.
ಇದರ ಮುಂದಿನ ಭಾಗವಾಗಿ ಬೆಂಗಳೂರಿನಲ್ಲಿ ಭಾರತ್ ಬಯೋಟೆಕ್ನ ಹೊಸ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಲು ಭಾರತ ಸರಕಾರವು ೬೫ಕೋ.ರೂ.ಗಳ ನೆರವನ್ನು ಒದಗಿಸಲು ಮುಂದಾಗಿದೆ.ಇಷ್ಟಲ್ಲದೆ ಇತರ ೩ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳಿಗೂ ಲಸಿಕೆ ಉತ್ಪಾದನೆ ಹೆಚ್ಚಳಕ್ಕಾಗಿ ಆರ್ಥಿಕ ಬೆಂಬಲ ನೀಡಲಾಗುತ್ತಿದೆ.
ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಅಡಿ ಹೈದರಾಬಾದ್ನ ಇಂಡಿಯನ್ ಇಮ್ಯುನಾಲಜಿಕಲ್ಸ್ ಲಿಮಿಟೆಡ್(ಐಐಎಲ್), ಬುಲಂದರ್ಶಹರ್ನ ಭಾರತ್ ಇಮ್ಯುನಾಲಜಿಕಲ್ಸ್ ಅಂಡ್ ಬಯಲಾಜಿಕಲ್ಸ್ ಲಿಮಿಟೆಡ್(ಬಿಐಬಿಸಿಒಎಲ್)ಗಳು ಕೂಡಾ ಆಗಸ್ಟ್ -ಸೆಪ್ಟೆಂಬರ್ನೊಳಗೆ ತಿಂಗಳಿಗೆ 10-15ಮಿ.ಡೋಸ್ ಲಸಿಕೆ ಉತ್ಪಾದಿಸುವಂತಾಗಲು ಕೇಂದ್ರ ಸರಕಾರ ನೆರವು ಒದಗಿಸಲಿದೆ ಎಂದು ಸರಕಾರ ತಿಳಿಸಿದೆ.