ʼಸ್ವರಾಜ್ ಸಂವಿಧಾನʼ ಸಿದ್ಧಪಡಿಸಿದ, ʼದಕ್ಷಿಣದ ಸಿಂಹʼ ಎಂದೇ ಖ್ಯಾತರಾದ ಇವರ ಬಗ್ಗೆ ನೀವು ತಿಳಿಯಲೇಬೇಕು..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ʼದಕ್ಷಿಣದ ಭಾರತದ ಸಿಂಹ’ ಎಂದು ಕರೆಯಲ್ಪಡುವ ಚಕ್ರವರ್ತಿ ವಿಜಯರಾಘವಾಚಾರ್ಯರು 18 ಜೂನ್ 1852 ರಂದು ತಮಿಳುನಾಡಿನ ಚಿಂಗಲ್‌ಪುಟ್ ಜಿಲ್ಲೆಯ ಮಧುರಾಂತಕಂನಲ್ಲಿ ಜನಿಸಿದರು. ಅವರು 1875 ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ತಮ್ಮ ಬಿಎ ಪದವಿಯನ್ನು ಪಡೆದುಕೊಂಡರು. ಆ ಬಳಿಕ ಅದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು.
1882 ರಲ್ಲಿ ಸೇಲಂ ನಗರದಲ್ಲಿ ಗಲಭೆ ಪ್ರಾರಂಭವಾಯಿತು. ವಿಜಯರಾಘವಾಚಾರ್ಯರ ಮೇಲೆ ಮಸೀದಿ ಧ್ವಂಸಗೊಳಿಸಿ ಹಿಂಸಾಚಾರವನ್ನು ಪ್ರಚೋದಿಸಿದ ಆರೋಪ ಹೊರಿಸಿ ಹತ್ತು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಯಿತು. ಈ ಸಂದರ್ಭದಲ್ಲಿ ತಮ್ಮ ವಿರುದ್ಧದ ಆರೋಪ ಸುಳ್ಳು ಎಂದು ಸಾಬೀತುಪಡಿಸಲು ಅವರು ಪ್ರಭಲ ಕಾನೂನು ಹೋರಾಟ ನಡೆಸಿದರು. ತಮ್ಮ ವಿರುದ್ಧ ವೃಥಾ ಆರೋಪ ಹೊರಿಸಿದವರೆಲ್ಲರನ್ನು ಕಟಕಟೆಗೆ ತಂದು ನಿಲ್ಲಿಸಿದರು. ಹಾಗೂ ಈ ಪ್ರಕರಣದ ನಿರಪರಾಧಿಗಳನ್ನು ರಕ್ಷಿಸಲು ನಿರಂತರವಾಗಿ ಹೋರಾಡಿದರು. ಅವರ ಹೋರಾಟ ಮನೋಭಾವ ಹಾಗೂ ವಾಗ್ಫಟುತ್ವ ಭಾರತೀಯ ರಾಷ್ಟ್ರೀಯ ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಚಾರ ಪಡೆಯಿತು. ಅಲ್ಲಿಂದ ವಿಜಯರಾಘವಾಚಾರ್ಯ ಮುನ್ನೆಲೆಗೆ ಬಂದರು. ದಕ್ಷಿಣ ಭಾರತದ ಸಿಂಹ ಎಂಬ ಬಿರುದನ್ನು ಪಡೆದರು.
1882 ರಲ್ಲಿ ಸೇಲಂ ಮುನ್ಸಿಪಲ್ ಕೌನ್ಸಿಲ್ ಸದಸ್ಯರಾಗಿ ರಾಜಕೀಯವನ್ನು ಪ್ರವೇಶಿಸಿದರು.  ತಮ್ಮ 36 ನೇ ವಯಸ್ಸಿನಲ್ಲೇ ಅವರು ಕಾಂಗ್ರೆಸ್ ಪಕ್ಷದ ಸಂವಿಧಾನವನ್ನು ರಚಿಸಿದರು. ಅಮೃತಸರದ ಕಾಂಗ್ರೆಸ್ ಅಧಿವೇಶನದಲ್ಲಿ (1919), ಅವರು ನಾಗರಿಕರ ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡಿದರು, ಅದು ನಂತರ ಭಾರತದ ಸಂವಿಧಾನಕ್ಕೆ ಆಧಾರವಾಯಿತು. 1920 ರಲ್ಲಿ ನಾಗ್ಪುರದ ಅಧಿವೇಶನದಲ್ಲಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದರು. ಅಧಿವೇಶನದಲ್ಲಿ ಗಾಂಧಿಯವರು ಅಸಹಕಾರ ಚಳುವಳಿಯನ್ನು ಪ್ರಸ್ತಾಪಿಸಿದರು. ʼಭಾರತೀಯರು ತಮ್ಮದೇ ಆದ ಸಂವಿಧಾನವನ್ನು ರಚಿಸುವಲ್ಲಿ ಅಸಮರ್ಥರುʼ ಎಂಬ ಭಾರತದ ರಾಜ್ಯ ಕಾರ್ಯದರ್ಶಿ ಲಾರ್ಡ್ ಬಿರ್ಕೆನ್‌ಹೆಡ್ ಮೂದಲಿಕೆಯನ್ನು ಸವಾಲಾಗಿ ಸ್ವೀಕರಿಸಿದ ವಿಜಯರಾಘವಾಚಾರ್ಯ 1930 ʼಭಾರತದ ಸ್ವರಾಜ್ ಸಂವಿಧಾನವನ್ನುʼ ಸಿದ್ಧಪಡಿಸಿದರು. ಅವರು 1931 ರಲ್ಲಿ ಹಿಂದೂ ರಾಷ್ಟ್ರೀಯವಾದಿ ಪಕ್ಷವಾದ ಹಿಂದೂ ಮಹಾಸಭಾದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಅವರು ಅಸ್ಪೃಶ್ಯತೆ ವಿರುದ್ಧ ಹೋರಾಡಿದರು ಮತ್ತು ಲಿಂಗ ಸಮಾನತೆಯನ್ನು ನಂಬಿದ್ದರು. ಮಗಳು ತನ್ನ ತಂದೆಯ ಆಸ್ತಿಯಲ್ಲಿ ಪಾಲು ಹೊಂದುವ ಹಕ್ಕನ್ನು ಬಲವಾಗಿ ಪ್ರತಿಪಾದಿಸಿದರು. ಅವರು 1944ರಲ್ಲಿ ತಮ್ಮ 92 ನೇ ವಯಸ್ಸಿನಲ್ಲಿ ನಿಧನರಾದರು.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!