ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ 24 ರೋಗಿಗಳು ಮೃತಪಟ್ಟ ಪ್ರಕರಣದ ತನಿಖೆ ನಡೆಸಿ, ಮೂರು ದಿನದಲ್ಲಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಐಎಎಸ್ ಅಧಿಕಾರಿ ಶಿವಯೋಗಿ ಕಳಸದ ಅವರನ್ನು ವಿಚಾರಣಾಧಿಕಾರಿಯಾಗಿ ಸರ್ಕಾರ ನೇಮಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಸದಸ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿ ಎನ್ ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದು, ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ದಿನಾಂಕ 02-05-2021ರ ಬೆಳಿಗ್ಗೆ 9 ಗಂಟೆಯಿಂದ ದಿನಾಂಕ 03-05-2021ರ ಬೆಳಿಗ್ಗೆ 7 ಗಂಟೆಯವರೆಗೆ ಕೋವಿಡ್-19 ಸೋಂಕಿನಿಂದ ಬಾಧಿತರಾದ ಸುಮಾರು 23 ಸೋಂಕಿತರು ಸಾವಿಗೆ ತುತ್ತಾಗಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಇದು ತೀವ್ರ ಕಳವಳಕಾರಿಯಾಗಿರುತ್ತದೆ.
ಈ ಘಟನೆಯನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು, ಕೋವಿಡ್-19 ಸೋಂಕಿತ ಸುಮಾರು 23 ಮಂದಿ ಸಾವಿಗೆ ಕಾರಣವಾದ ಹಿನ್ನಲೆಯಲ್ಲಿ ಪತ್ತೆ ಹಚ್ಚಿ, ಸರ್ಕಾರಕ್ಕೆ ವರದಿ ನೀಡಲು ಶಿವಯೋಗಿ ಕಳಸದ, ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಇವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಗಿದೆ. ವಿಚಾರಣಾಧಿಕಾರಿಗಳು ತಮ್ಮ ತನಿಖಾ ವರದಿಯನ್ನು 3 ದಿವಸಗಳೊಳಗೆ ಸರ್ಕಾರಕ್ಕೆ ಸಲ್ಲಿಸುವುದು
ಈ ಆದೇಶವನ್ನು ವಿಪತ್ತು ನಿರ್ವಹಣೆ ಕಾಯ್ದೆ 2005ರಲ್ಲಿನ ಸೆಕ್ಷನ್ 24(ಇ) ಮತ್ತು (ಎಲ್)ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ರಾಜ್ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರ ನಿರ್ದೇಶನದಂತೆ ಹೊರಡಿಸಲಾಗಿದೆ ಎಂದಿದ್ದಾರೆ.