ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದಲ್ಲಿ ನಾರಾ ಚಂದ್ರಬಾಬು ನಾಯ್ಡು ಅವರು ಬುಧವಾರ ಜೂನ್ 12 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
74ರ ಹರೆಯದ ನಾಯ್ಡು ಮಂಗಳವಾರ ವಿಜಯವಾಡದ ರಾಜಭವನದಲ್ಲಿ ಆಂಧ್ರಪ್ರದೇಶದ ರಾಜ್ಯಪಾಲ ಎಸ್ ಅಬ್ದುಲ್ ನಜೀರ್ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಔಪಚಾರಿಕವಾಗಿ ಹಕ್ಕು ಮಂಡಿಸಿದರು.
ಅವರ ಜೊತೆ ಪಕ್ಷದ ಮಿತ್ರಪಕ್ಷಗಳಾದ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ದಗ್ಗುಬಾಟಿ ಪುರಂದೇಶ್ವರಿ ಕೂಡ ಇದ್ದರು.
‘ಬಿಜೆಪಿ, ಜನಸೇನಾ ಮತ್ತು ಟಿಡಿಪಿಯ ಎಲ್ಲಾ ಶಾಸಕರು ನಾನು ಆಂಧ್ರಪ್ರದೇಶದ ಎನ್‌ಡಿಎ ಸರ್ಕಾರದ ಮುಂಬರುವ ಮುಖ್ಯಮಂತ್ರಿಯಾಗಲು ತಮ್ಮ ಒಪ್ಪಿಗೆಯನ್ನು ನೀಡಿದ್ದಾರೆ’ ಎಂದು ಎನ್‌ಡಿಎ ಶಾಸಕರ ಸಭೆಯ ನಂತರ ನಾಯ್ಡು ಹೇಳಿದ್ದಾರೆ.
2014 ರಲ್ಲಿ, ನಾಯ್ಡು ವಿಭಜಿತ ಆಂಧ್ರಪ್ರದೇಶದ ಮೊದಲ ಮುಖ್ಯಮಂತ್ರಿಯಾಗಿ 2019 ರವರೆಗೆ ಸೇವೆ ಸಲ್ಲಿಸಿದರು. 2019 ರ ಚುನಾವಣೆಯಲ್ಲಿ ಅವರು ಪರಾಭವಗೊಂಡಿದ್ದರು.
ಚಂದ್ರಬಾಬು ನಾಯ್ಡು ಯಾವಾಗ ಮತ್ತು ಎಲ್ಲಿ ಪ್ರಮಾಣವಚನ?
ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಅವರು ಜೂನ್ 12 ರಂದು ಬುಧವಾರ ಬೆಳಿಗ್ಗೆ 11.27 ಕ್ಕೆ ವಿಜಯವಾಡದ ಹೊರವಲಯದಲ್ಲಿರುವ ಗನ್ನವರಂ ವಿಮಾನ ನಿಲ್ದಾಣದ ಬಳಿ ಇರುವ ಕೇಸರಪಲ್ಲಿ ಐಟಿ ಪಾರ್ಕ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಪ್ರಮಾಣ ವಚನ ಸ್ವೀಕಾರಕ್ಕೆ ಯಾರೆಲ್ಲಾ ಬರಲಿದ್ದಾರೆ?
ನಾಯ್ಡು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹಲವಾರು ಉನ್ನತ ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮೋದಿ ಬುಧವಾರ ಬೆಳಗ್ಗೆ 8:20ಕ್ಕೆ ದೆಹಲಿಯಿಂದ ಗನ್ನವರಂ ವಿಮಾನ ನಿಲ್ದಾಣಕ್ಕೆ ತೆರಳಿ 10:40ಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಆಂಧ್ರಪ್ರದೇಶದ ಮುಖ್ಯ ಕಾರ್ಯದರ್ಶಿ ನೀರಭ್ ಕುಮಾರ್ ಪ್ರಸಾದ್ತಿಳಿಸಿದ್ದಾರೆ.