ಹೊಸದಿಗಂತ ವರದಿ, ಹಾಸನ:
ಚನ್ನಪಟ್ಟಣ ಚುನಾವಣಾ ಫಲಿತಾಂಶ ವಿಚಾರವಾಗಿ ಯಾರೂ ಬೆಟ್ಟಿಂಗ್ ಕಟ್ಟದಂತೆ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಸನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮನವಿ ಮಾಡಿದ್ದಾರೆ.
ಯಾರೂ ಕೂಡ ಬೆಟ್ಟಿಂಗ್ ಕಟ್ಟಿ ಆರ್ಥಿಕ ನಷ್ಟ ಅನುಭವಿಸಬೇಡಿ. ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿ ಆರಾಮಾಗಿರಿ. ಬೆಟ್ಟಿಂಗ್ನಿಂದ ಎಷ್ಟೋ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಚುನಾವಣೆಯ ಫಲಿತಾಂಶ ವಿಚಾರವಾಗಿ ಯಾರೂ ಬೆಟ್ಟಿಂಗ್ ಕಟ್ಟಬೇಡಿ. ಫೋನ್ ಸ್ವಿಚ್ ಆಫ್ ಮಾಡಿ ಮಲಗಿಬಿಡಿ, ಬೆಟ್ಟಿಂಗ್ ಕಟ್ಟಿ ಆರ್ಥಿಕ ನಷ್ಟ ಅನುಭವಿಸಬೇಡಿ. ಮಾಧ್ಯಮದ ಮೂಲಕ ನಿಖಿಲ್ ಕುಮಾರಸ್ವಾಮಿ ಅವರು ಮನವಿ ಮಾಡಿದರು.
ಎಲ್ಲರ ಬೆಂಬಲ ಸಿಕ್ಕಿದ್ದರಿಂದ ಗೆಲುವಿನ ವಿಶ್ವಾಸ ಮೂಡಿದೆ. ನಿಮ್ಮಲ್ಲಿ ಮನವಿ ಮಾಡುವೆ. ಎಲ್ಲದಕ್ಕೂ ದೇವರಿದ್ದಾನೆ. ಆರಾಮಾಗಿ ಮಲಗಿ. ಜನತೆಯ ಮತ್ತು ದೇವರ ಆಶೀರ್ವಾದದಿಂದ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು.
ಈ ಉಪಚುನಾವಣೆಯಲ್ಲಿ ಮಾಜಿ ಸಚಿವರು, ಶಾಸಕರು, ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಸಾಕಷ್ಟು ಜನ ನನ್ನ ಚುನಾವಣೆಗಾಗಿ ದುಡಿದಿದ್ದಾರೆ. ಜೆಡಿಎಸ್ ಪಕ್ಷದ ಇತಿಹಾಸದಲ್ಲಿ ಇಂತಹ ಚುನಾವಣೆ ನಡೆದಿರಲಿಲ್ಲ. ಇದು ಇತಿಹಾಸದ ಪುಟಗಳಲ್ಲಿ ಉಳಿಯುವ ಚುನಾವಣೆ ಎಂದರು
ಗೆಲುವಿನ ವಿಶ್ವಾಸವಿದೆ
ಯುವಕರು, ಹಿರಿಯರು ಸೇರಿದಂತೆ ಎಲ್ಲರೂ ಉತ್ಸಾಹದಿಂದ ನನ್ನ ಜೊತೆ ಹೆಜ್ಜೆ ಹಾಕಿದ್ದಾರೆ. ಹಾಗಾಗಿ ನನ್ನ ಹೃದಯದಲ್ಲಿ ಸಂಪೂರ್ಣ ಗೆಲುವಿನ ವಿಶ್ವಾಸವಿದೆ. ದೇವೇಗೌಡರು, ಕುಮಾರಣ್ಣ 1500 ಕೋಟಿ ಅನುದಾನ ತಂದು ಚನ್ನಪಟ್ಟಣದ ಅಭಿವೃದ್ಧಿ ಮಾಡಿದ್ದಾರೆ. ಕ್ಷೇತ್ರದ ಜನರು ಆಶೀರ್ವಾದ ಮಾಡಿದರೆ ಮುಂದಿನ ದಿನಗಳಲ್ಲಿ ಯುವ ಸಮುದಾಯಕ್ಕೆ ಆದ್ಯತೆ ಕೊಡುತ್ತೇನೆ. ಉದ್ಯೋಗ ಸೃಷ್ಟಿ ಮಾಡಲು ದೃಢ ಸಂಕಲ್ಪ ಮಾಡಿದ್ದೇನೆ ಎಂದು ತಿಳಿಸಿದರು
ಕುಮಾರಣ್ಣ ಲಾಟರಿ ನಿಷೇಧ ಮಾಡಿದ್ರು ಎಂದು ಮಾತಾಡ್ತೀವಿ,ಆದರೆ ಆನ್‌ಲೈನ್ ಗೇಮ್ ಗಳಿಗೆ ಬಹಳ ಜನ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು, ಇದು ಸಮಾಜವನ್ನ ಒಡೆಯುವ ಕೆಲಸ ಇಂತಹ ಕೃತ್ಯಗಳಿಗೆ ಯಾರೂ ಕೂಡ ಕೈ ಹಾಕಬೇಡಿ ಎಂದು ನಿಖಿಲ್ ಅವರು ಮನವಿ ಮಾಡಿದರು.
ದಾಖಲೆಗಳು ರಾಜ್ಯದ ಜನತೆ ಮುಂದೆ ಇಡಲಿ
ಆಪರೇಷನ್ ಕಮಲ ವಿಚಾರಕ್ಕೆ ಮಾತನಾಡಿದ ಅವರು, ಇದು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಆಗಬಾರದು. ಆ ರೀತಿ ದಾಖಲೆಗಳು ಇದೆ ಅನ್ನೋದಾದ್ರೆ ರಾಜ್ಯದ ಜನತೆ ಮುಂದೆ ಇಡಲಿ. ಇವೆಲ್ಲ ಚರ್ಚೆಗೆ ಗ್ರಾಸವಾಗುವ ವಿಚಾರ ಆಗಬಾರದು ಎಂದರು.
ಇವತ್ತು136 ಶಾಸಕರನ್ನ ಕಾಂಗ್ರೆಸ್ ನವರು ಇಟ್ಟುಕೊಂಡಿದ್ದಾರೆ. ಸರ್ಕಾರ ರಚನೆ ಮಾಡೋದಕ್ಕಿಂತ ಹೆಚ್ಚಿನ ಸ್ಥಾನವನ್ನ ಜನ ಕಾಂಗ್ರೆಸ್ ಪಕ್ಷಕ್ಕೆ ನೀಡಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಹಗರಣಗಳ ವಿರುದ್ಧ ನಾವುಕೂಡ ಜಾಗೃತಿ ಮೂಡಿಸುವ ಪಾದಯಾತ್ರೆ ಮಾಡಿದ್ದೇವೆ ಎಂದರು.
ಕಳೆದ ಲೋಕಸಭಾ ಚುನಾವಣೆ ವೇಳೆ ನಾಲ್ಕು ತಿಂಗಳು ಗ್ಯಾರಂಟಿ ತಡೆಹಿಡಿದಿದ್ದರು. ಈಗ ಚುನಾವಣೆ ಬರ್ತಿದ್ದಂಗೆ ಗೃಹಲಕ್ಷ್ಮಿ ಯೋಜನೆಯನ್ನ ನಾಲ್ಕೂ ತಿಂಗಳ ಹಣ ಒಟ್ಟಿಗೆ ಹಾಕ್ತೀವಿ ಅಂತಾರೆ. ಎಷ್ಟರ ಮಟ್ಟಿಗೆ ಜನಗಳಿಗೆ ಗ್ಯಾರೆಂಟಿ ರೀಚ್ ಆಗ್ತಿದೆ ಅನ್ನುವುದಕ್ಕೆ ಸರ್ಕಾರ ಉತ್ತರ ಕೊಡಬೇಕು ಎಂದು ಪ್ರಶ್ನಿಸಿದರು.
ಸರ್ಕಾರ ಉರುಳಿಸೋದಗಾಲಿ ಅಥವಾ ದುಡ್ಡು ಕೊಟ್ಟು ಎಂಎಲ್‌ಗಳನ್ನ ಕೊಂಡುಕೊಳ್ಳುವ ಪ್ರಶ್ನೆಯೇ ಇಲ್ಲ. ಇಂದು ರಾಜ್ಯ ಸರ್ಕಾರಕ್ಕೆ ಜನ ಏನು ಆಶೀರ್ವಾದ ಮಾಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನರೇ ತಿರಸ್ಕಾರ ಮಾಡುತ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.