ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ವಿಶ್ವವಿಖ್ಯಾತ ಚನ್ನಪಟ್ಟಣದ ಗೊಂಬೆ ಉದ್ಯಮಕ್ಕೆ ಕೊರೋನಾ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕಳೆದ 15 ತಿಂಗಳಿನಿಂದ ಗೊಂಬೆ ಮಾರಾಟ ಇಲ್ಲದೆ ಎಷ್ಟೋ ಕುಟುಂಬಗಳು ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ಬಂದಿದೆ.
ಗೊಂಬೆ ತಯಾರಿಸಲು ಬೇಕಾದ ಕಚ್ಛಾ ಪದಾರ್ಥಗಳ ಬೆಲೆಯೂ ಕೊರೋನಾ ಕಾರಣದಿಂದ ಏರಿಕೆಯಾಗಿದ್ದು, ಹೊಸ ಗೊಂಬೆಗಳನ್ನು ಮಾಡಲಾಗದೆ, ಇರುವ ಗೊಂಬೆಗಳನ್ನು ಮಾರಲಾಗದೆ ಜನ ಹೈರಾಣಾಗಿದ್ದಾರೆ.
ಚೀನಾದ ಗೊಂಬೆಗಳ ನಡುವೆಯೂ ಚನ್ನಪಟ್ಟಣದ ಗೊಂಬೆಗಳಿಗೆ ಬೇಡಿಕೆ ಇತ್ತು. ಗುಣಮಟ್ಟ ಬಾಳಿಕೆ ವಿಷಯದಲ್ಲಿ ಚನ್ನಪಟ್ಟಣದ ಗೊಂಬೆಗಳ ಮುಂದೆ ಬೇರಾವುದು ಇಲ್ಲ.
ಕೊರೋನಾದಿಂದಾಗಿ ಪ್ರವಾಸಿ ತಾಣಗಳಿಗೂ ಜನ ಕಡಿಮೆ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಅನಿವಾರ್ಯವಾಗಿ ಗೊಂಬೆಗಳ ಬೆಲೆ ಕೊಂಚ ಏರಿಕೆಯಾಗಿದ್ದು, ಜನ ಖರೀದಿಗೆ ಮುಂದೆ ಬರುತ್ತಿಲ್ಲ. ಸರ್ಕಾರವು ಗೊಂಬೆಗಳ ಮೇಲೆ ಶೇ.12 ರಿಂದ 28 ರಷ್ಟು ತೆರಿಗೆ ವಿಧಿಸುತ್ತಿದ್ದು, ಗೊಂಬೆ ಬೆಲೆ ಕೂಡ ಹೆಚ್ಚಾಗಿದೆ. ಹೆಚ್ಚಾದ ಬೆಲೆಯುಳ್ಳ ಗೊಂಬೆಗಳನ್ನು ಜನ ಖರೀದಿ ಮಾಡುತ್ತಿಲ್ಲ ಎಂದು ಗೊಂಬೆ ತಯಾರಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ದಸರಾ ಸಮಯದಲ್ಲಿಯೂ ಗೊಂಬೆ ಪ್ರದರ್ಶನ ಇಲ್ಲ. ಈ ಬಾರಿ ದಸರಾ ಬಗ್ಗೆಯೂ ನಂಬಿಕೆ ಇಲ್ಲ ಎಂದು ಗೊಂಬೆ ತಯಾರಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಗೊಂಬೆ ತಯಾರಿಕೆ ಮೇಲೆ ಬೀರುತ್ತಿರುವ ದುಷ್ಪರಿಣಾಮ ಅರಿತು ಸರ್ಕಾರ ವಿಶೇಷ ಯೋಜನೆ ರೂಪಿಸಬೇಕಿದೆ.