ಹೊಸದಿಗಂತ ವರದಿ ಚಿಕ್ಕಮಗಳೂರು:
ಕರ್ತವ್ಯ ಲೋಪ ಆರೋಪದ ಮೇಲೆ ಪ್ರಭಾರಿ ಮುಖ್ಯ ಶಿಕ್ಷಕಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ.
ಮೂಡಿಗೆರೆ ತಾಲ್ಲೂಕು ಕಿತ್ತಲೆಗಂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಭಾರಿ ಮುಖ್ಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಎಚ್.ಎಸ್. ಶೀಲಾರಾಣಿ ಅಮಾನತುಗೊಂಡ ಶಿಕ್ಷಕಿ.
ಶಾಲಾ ಸಮಯದಲ್ಲಿ ಅತಿಯಾದ ಮೊಬೈಲ್ ಬಳಕೆ, ಪಠ್ಯ ಚಟುವಟಿಕೆಗಳಲ್ಲಿ ನಿರುತ್ಸಾಹ, ಬಿಸಿಯೂಟ ಯೋಜನೆಯಲ್ಲಿ ಅವ್ಯವಹಾರ, ಲೆಕ್ಕಪತ್ರಗಳ ತಪ್ಪು ನಿರ್ವಹಣೆ ಆರೋಪವಿತ್ತು.
ಈ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಮಾನತು ಆದೇಶ ನೀಡಿದ್ದಾರೆ.
ಈ ಶಿಕ್ಷಕಿ ವಿರುದ್ಧ ಶಾಲಾ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಹಾಗೂ ಸ್ಥಳೀಯರು ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದ್ದರು. ತನಿಖೆಯಿಂದ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿದ್ದು, ಹತ್ತಕ್ಕೂ ಹೆಚ್ಚು ಆರೋಪಗಳನ್ನು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.