Saturday, September 23, 2023

Latest Posts

1857ರ ಸಂಗ್ರಾಮಕ್ಕೂ ಮುನ್ನವೇ ಆ ಮಹಾವೀರ ಬ್ರಿಟೀಷರ ವಿರುದ್ಧ ದೊಡ್ಡ ಕ್ರಾಂತಿ ನಡೆಸಿದ್ದ; ʼಇತಿಹಾಸ ಮುಚ್ಚಿಟ್ಟʼ ಕಥೆಯಿದು

ಹೊಸದಿಗಂತ ಡಿಜಿಟಲ್‌ ಡೆಸ್ಕ್ (ಸ್ವಾತಂತ್ರ್ಯೋತ್ಸದ ಅಮೃತ ಮಹೋತ್ಸವದ ವಿಶೇಷ)
ನಮಗೆ 1857‌ ರಲ್ಲಿ ಬ್ರಿಟೀಷ್‌ ರ ವಿರುದ್ಧ ನಡೆದಿದ್ದ ಮೊದಲ ಶಸ್ತ್ರಸಜ್ಜಿತ ಸ್ವಾತಂತ್ರ್ಯ ಹೋರಾಟದ ಬಗ್ಗೆ ಗೊತ್ತು. ಆಡಳಿತದ ಮರ್ಜಿಗೆ ಬಿದ್ದ ಕೆಲ ಭಾರತೀಯ ಇತಿಹಾಸಕಾರರೇ ಅದನ್ನು ಸಿಪಾಯಿ ದಂಗೆ ಎಂದು ಕರೆದು ಅದೊಂದು ʼಸಣ್ಣ ದಂಗೆ ಅಷ್ಟೇʼ ಎಂದು ಪ್ರಚುರಪಡಿಸಿದರು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ದೊಡ್ಡ ಮೈಲುಗಲ್ಲಾಗಿದ್ದ 1857‌ರ ಹೋರಾಟದ ಬಗ್ಗೆ ನಮಗೆ ಇಂದಿಗೂ ಲಭ್ಯವಾಗುವ ಮಾಹಿತಿಗಳು ಅತ್ಯಲ್ಪ. ಅದರಲ್ಲಿಯೂ ಹೆಚ್ಚಿನ ವಿಚಾರಗಳನ್ನು ತಿಳಿಯದಂತೆ ಮಾಡಲಾಗಿದೆ. ಆದರೆ 1857ರ ಸಂಘರ್ಷಕ್ಕಿಂತ ಸರಿಸುಮಾರು 20 ವರ್ಷಗಳ ಮುನ್ನವೇ, ಭಾರತಖಂಡದ ಮಹಾವೀರನೊಬ್ಬ ಬ್ರಿಟೀಷರ ವಿರುದ್ಧ ದೊಡ್ಡ ಶಸ್ತ್ರಾಸ್ತ್ರ ಹೋರಾಟ ನಡೆಸಿದ್ದ. ಭಾರತೀಯರ ಶೌರ್ಯ ಗುಣಗಳನ್ನು ಬ್ರಿಟೀಷರಿಗೆ ಪರಿಚಯಿಸಿದ್ದ. ವಸಹಾತುವಿನ ಜನರನ್ನು ಹೀನವಾಗಿ ಕಾಣುತ್ತಿದ್ದ ಬಿಳಿಯ ದೊರೆಗಳಿಗೆ ನಡುಕ ಹುಟ್ಟಿಸಿದ್ದ.
ಚೌಪಾ ಪ್ಲ್ಯಾಂಗ್ಲು (ರೊನುವಾ ಗೊಹೈನ್) ಅರುಣಾಚಲ ಪ್ರದೇಶದಲ್ಲಿ ಹರಡಿಕೊಂಡಿದ್ದ ತೈ ಖಮ್ತಿ ಬುಡಕಟ್ಟಿನ ಮುಖ್ಯಸ್ಥ. ಚೌಪಾ ಬ್ರಿಟೀಷರ ಬದ್ಧ ದ್ವೇಷಿ. ಅದಕ್ಕಿಂತಲೂ ಹೆಚ್ಚಿನದಾಗಿ ಕಟ್ಟಾ ದೇಶಭಿಮಾನಿ. ಅದಾಗಲೇ ಅಸ್ಸಾಂನ ಸಾದಿಯಾ ಪ್ರಾಂತ್ಯವನ್ನು ಆಕ್ರಮಿಸಿಕೊಂಡಿದ್ದ ಬ್ರಿಟಿಷರನ್ನು ದೇಶದಿಂದಲೇ ಓದ್ದೋಡಿಸುವುದು ಎಂಬುದು ಚೌಫಾ ಮಹಾಗುರಿಯಾಗಿತ್ತು. ಅದಕ್ಕಾಗಿ 1830ರ ದಶಕದ ಆರಂಭದಿಂದಲೂ ಚೌಫಾ ರಹಸ್ಯವಾಗಿ ಯೋಜನೆಗಳನ್ನು ರೂಪಿಸುತ್ತಿದ್ದ. 1839 ರ ಜನವರಿಯಲ್ಲಿ ಚೌಫಾಗೆ ಸುವರ್ಣಾವಕಾಶವೊಂದು ದೊರಕಿತು. ಸಾದಿಯಾದಲ್ಲಿನ ಬ್ರಿಟೀಷ್ ಕಮಾಂಡಿಂಗ್ ಅಧಿಕಾರಿ ಕರ್ನಲ್ ಆಡಮ್ ವೈಟ್ ತಾನು ನಡೆಸುತ್ತಿದ್ದ ದರ್ಬಾರ್‌ಗೆ ತೈ ಖಮ್ತಿ ಮುಖ್ಯಸ್ಥ ಚೌಪಾ ಮತ್ತು ಇತರರನ್ನು ಆಹ್ವಾನಿಸಿದ. ಚೌಫಾ ಪ್ಲಾಂಗ್ಲು ಬ್ರಿಟಿಷ್ ಕಂಟೋನ್ಮೆಂಟ್ ಮೇಲೆ ದಾಳಿ ಮಾಡಲು ಇದನ್ನೇ ಒಂದು ದೊಡ್ಡ ಅವಕಾಶವಾಗಿ ಪರಿವರ್ತಿಸಿದ.
ಪ್ರತಿಯೊಂದು ಅಂಶವನ್ನೂ ಯೋಚಿಸಿ ಯೋಜನೆ ಹಾಕಿಕೊಂಡ. ಆ ಬಳಿಕ ತನ್ನ ನಂಬಿಕಸ್ತ ಜನರನ್ನು ಕರೆದು ವ್ಯವಸ್ಥಿತವಾಗಿ ತಂತ್ರಗಳನ್ನು ರೂಪಿಸಿದ. ಆತ ಈ ಯೋಜನೆಯ ಭಾಗವಾಗಿ ನಾಲ್ಕು ಗುಂಪುಗಳನ್ನು ರಚಿಸಿದ. ಪ್ರತಿಯೊಂದು ಗುಂಪಿಗೆ ಗೊತ್ತುಪಡಿಸಿದ ದಿಕ್ಕುಗಳಿಂದ ದಾಳಿ ಮಾಡಲು ನಿರ್ದೇಶನ ನೀಡಿದ.
ಅವತ್ತು 1839ರ ಜನವರಿ 28 ರ ದಿನ. ಎಲ್ಲವೂ ಸಿದ್ಧಗೊಂಡ ಬಳಿಕ ಏನೂ ನಡೆದೇ ಇಲ್ಲ ಎಂಬಂತೆ ಕರ್ನಲ್ ಆಡಮ್ ವೈಟ್ ನ ದರ್ಬಾರ್‌ ಗೆ ತೆರಳಿದ. ಅಂದಿಗೆ ಬ್ರಿಟೀಷರು ಶತೃಗಳು ಎಂದು ಪರಿಗಣಿಸಿದವರೆಲ್ಲಾ ಕೋಟೆಯ ಒಳಗೆ ಇದ್ದುದರಿಂದ ಹೊರಗೆ ಪಹರೆ ತೀರಾ ಕಡಿಮೆ ಪ್ರಮಾಣದಲ್ಲಿತ್ತು. ಮಧ್ಯಾಹ್ನ ಸುಮಾರು ಮೂರು ಗಂಟೆಗೆ ಸುಮಾರಿಗೆ ಅಲ್ಲಿ ಕೋಲಾಹಲ ಸೃಷ್ಠಿಯಾಗತೊಡಗಿತು. ಬಿಲ್ಲುಬಾಣಗಳು, ಈಟಿಗಳು, ಯುದ್ಧ ಕೊಡಲಿಗಳು ಮತ್ತು ಚಾಕುಗಳೊಂದಿಗೆ ಶಸ್ತ್ರಸಜ್ಜಿತವಾದ 600 ಹೆಚ್ಚಿ ಚೌಫಾ ಪ್ಲಂಗ್ಲು ಅವರ ಯೋಧರೊಂದಿಗೆ ಬ್ರಿಟಿಷ್ ಕಂಟೋನ್ಮೆಂಟ್ ಎಲ್ಲಾ ದಿಕ್ಕುಗಳಿಂದಲೂ ಏಕಕಾಲದಲ್ಲಿ ದಾಳಿ ನಡೆಸಿ ಒಳನುಗ್ಗಿದರು. ಬ್ರಿಟೀಷರು ಎಚ್ಚತ್ತುಕೊಳ್ಳುವ ಮೊದಲೇ ರಕ್ಷಣೆಗೆ ನಿಯೋಜಿಸಿದ್ದ ಒಬ್ಬೊಬ್ಬರೇ ಸಿಪಾಯಿ ಗಳ ಹೆಣ ಬಿದ್ದಿತ್ತು. ದಾರಿಯಲ್ಲಿ ಸಿಕ್ಕ ಎಲ್ಲರನ್ನು ಕೊಂದರು. ಹೊರಗೆ ಕೇಳುತ್ತಿದ್ದ ಕೋಲಾಹಲಗಳಿಂದ ಗೊಂದಲಗೊಂಡ ಮೇಜರ್ ಆಡಮ್ ವೈಟ್ ತನ್ನ ಬಂಗಲೆಯಿಂದ ಮಿಲಿಟರಿ ಲೈನ್‌ಗಳ ಕಡೆಗೆ ವೇಗವಾಗಿ ಹೊರಟ. ಆದರೆ ಅವನು ಅಲ್ಲಿ ಕಂಡಿದ್ದೇನು..? ಸ್ವತಹ ಖಡ್ಗ ಹಿರಿದಿದ್ದ ಯಮಸ್ವರೂಪಿ ಚೌಫಾ ಪ್ಲಾಂಗ್ಲು ಅವನಿಗೆ ಎದುರಾಗಿ ನಿಂತಿದ್ದ. ಆಡಮ್ ವೈಟ್ ಗೆ ಮಿಸುಗಾಡಲೂ ಅವಕಾಶ ನೀಡದೆ ಒಂದೇ ಏಟಿಗೆ ಅವನ ತಲೆಯನ್ನು ಕತ್ತರಿಸಿದ. ಈ ದಾಳಿಯಲ್ಲಿ ತೈ ಖಮ್ತಿ ಸೈನ್ಯವು 80ಕ್ಕೂ ಹೆಚ್ಚಿನ ಬ್ರಿಟಿಷ್ ಪ್ರಜೆಗಳನ್ನು ಕೊಂದುಹಾಕಿತು. ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡರು. ಈ ಕಾಳಗದಲ್ಲಿ  ಪ್ಲಂಗ್ಲು ಸೈನ್ಯದ 21 ವೀರರು ಪ್ರಾಣಾರ್ಪಣೆ ಮಾಡಿದರು.
ಬ್ರಟೀಷರ ವಿರುದ್ಧ ಅನಾಯಾಸವಾಗಿ ಗೆದ್ದ ಚೌಫಾ ಪ್ಲಾಂಗ್ಲು ಬ್ರಿಟೀಷ್‌ ಸಾಮ್ರಾಜ್ಯದ ಮೇಲೆ ವಿಜಯದ ಬಾವುಟ ಹಾರಿಸಿದ. ಈ ಸೋಲು ಭಾರತದಲ್ಲಿ ಬ್ರಿಟೀಷರಿಗೆ ಎದುರಾದ ಹಿನಾಯ ಸೋಲಾಗಿತ್ತು. ಬ್ರಿಟೀಷರು ಅಜೇಯರು, ಅವರನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂಬ ಶತಮಾನದ ನಂಬಿಕೆಗಳನ್ನೆಲ್ಲಾ ಚೌಫಾ ಒಂದೇ ದಿನದಲ್ಲಿ ನುಚ್ಚುನೂರು ಮಾಡಿಬಿಟ್ಟಿದ್ದ.
ಬ್ರಿಟೀಷರು ದೊಡ್ಡ ಅವಮಾನ ಎದುರಿಸಿದರು. ಆ ವರೆಗೆ ಅವರ ಭಯದಿಂದ ಸುಮ್ಮನಿದ್ದವರಿಗೆಲ್ಲ ಈ ವಿಜಯ ಹೊಸ ಹುಮ್ಮಸ್ಸು ತಂದಿತು. ಬ್ರಿಟೀಷರು ಎಚ್ಚೆತ್ತರು. ಹೀಗೆ ಆದರೆ ಭಾರತದಲ್ಲಿ ತಾವು ಕಟ್ಟಿದ ಸಾಮ್ರಾಜ್ಯಕ್ಕೆ ಉಳಿಯುವುದಿಲ್ಲ ಎಂದು ಅರಿತರು. ತೈ ಖಮ್ತಿ ಗಳ ಮೇಲಿನ ಪ್ರತಿಕಾರಕ್ಕೆ ಲೆಫ್ಟಿನೆಂಟ್ ಮಾರ್ಷಲ್ ಮತ್ತು ಕ್ಯಾಪ್ಟನ್ ಹ್ಯಾನಿ ಅವರ ನೇತೃತ್ವದಲ್ಲಿ ದೊಡ್ಡ ಸೈನ್ಯವನ್ನು ಕಳುಹಿಸಿದರು.
ಹೋರಾಟದ ಸಮಯದಲ್ಲಿ ಬ್ರಿಟೀಷರ ಕೈ ಮೇಲಾಯಿತು. ಚೌಫಾ ಯುದ್ಧಭೂಮಿಯಿಂದ ಹೊರಟು ಕುಂಡಿಲ್ ನದಿಯ ದಡದಲ್ಲಿ ಆಶ್ರಯ ಪಡೆದ. ಆತನಿಗೆ ಯುದ್ಧದ ಸಮಯದಲ್ಲಿ ಕಾಲಿಗೆ ಗಾಯವಾಗಿ ಮುಂದೆ ಸಾಗಲು ಕಷ್ಟವಾಗಿತ್ತು. ಆದರೆ ಕೆ ವಿದ್ರೋಹಿ ಮೀನುಗಾರರ ಗುಂಪು ಬ್ರಿಟಿಷರಿಗೆ ಅವನ ಸ್ಥಳವನ್ನು ಬಹಿರಂಗಪಡಿಸಿತು. 1839 ರ ಜನವರಿ 28 ರಂದು ಬ್ರಿಟಿಷ್ ಸೈನ್ಯವು ಅವನನ್ನು ಸುತ್ತುವರೆಯಿತು. ಆದರೆ ಚೌಫಾ ಪ್ಲಾಂಗ್ಲು ಶತ್ರುಗಳಿಗೆ ಸೆರೆಸಿಕ್ಕಿ ಸಾಯುವುದಕ್ಕಿಂತ ಗೌರವಯುತವಾಗಿ ಸಾಯುವುದಕ್ಕೆ ನಿರ್ಧರಿಸಿದ. ಬ್ರಿಟಿಷ್ ಸೈನ್ಯ ಆತನಿಗೆ  ಶರಣಾಗುವಂತೆ ಕರೆ ನೀಡಿತು. ಅವರು ತನ್ನ ಬಳಿಗೆ ಬರುವವರೆಗೂ ಚೌಪಾ ಸುಮ್ಮನೆ ಕುಳಿತಿದ್ದ. ಬ್ರಿಟೀಷ್‌ ಸೈನಿಕರು ಹತ್ತಿರಕ್ಕೆ ಬರುತ್ತಿದ್ದಂತೆ ಚಂಗನೆ ಎದ್ದು, ಕ್ಷಣಾರ್ಧದಲ್ಲಿ ತನ್ನ ಕತ್ತಿಯನ್ನು ಹೊರಕ್ಕೆಳೆದು ನಾಲ್ಕಾರು ಬ್ರಿಟೀಷ್ ಸಿಪಾಯಿಗಳ ತಲೆಯನ್ನು ಹಾರಿಸಿದ. ಅಷ್ಟಲ್ಲಿ ಅಲ್ಲಿಗೆ ಬಂದ ಬ್ರಿಟೀಷ್‌ ಅಧಿಕಾರಿಗಳು ಘಟನೆ ಕಂಡು ಡಿಚ್ಮೂಢರಾದರು. ತಕ್ಷಣವೇ, ಪ್ರತೀಕಾರವಾಗಿ ಬ್ರಿಟೀಷ್ ಸೈನ್ಯವು ಅವನ ಮೇಲೆ‌ ಮನಬಂದಂತೆ ಗುಂಡು ಹಾರಿಸಿತು. ಚೌಪಾ ತನ್ನ ಜೀವಿತದ ಕಟ್ಟಕಡೆಯ ಕ್ಷಣದಲ್ಲೂ ಬ್ರಿಟೀಷರ ಕಣ್ಣುಗಳಲ್ಲಿ ಸುಳಿಯುತ್ತಿದ್ದ ಭಯದ ನೆರಳನ್ನು ನೋಡುತ್ತಲೇ ಸಂತೃಪಿಯಿಂದ ವೀರ ಮರಣವನ್ನು ಅಪ್ಪಿಕೊಂಡ. ಬೇರೆ ಯಾವುದೇ ದೇಶದಲ್ಲಿ ಚೌಪಾ ಪ್ಲ್ಯಾಂಗ್ಲುವಿನಂತಹ ವೀರ ಹುಟ್ಟಿದ್ದರೆ ಆತ ನಿತ್ಯ ಆರಾಧಿಸಲ್ಪಡುತ್ತಿದ್ದ. ಅವನ ಹೆಸರೇ ಭಕ್ತಿ ಗೌರವಗಳನ್ನು ಉಕ್ಕಿಸುತ್ತಿತ್ತು. ಅಂತಹ ಸೇನಾನಿಯನ್ನು ಪಡೆದಿದ್ದಕ್ಕೆ ಜನರು ತಾವೇ ಧನ್ಯರು ಎಂದು ಭಾವಿಸುತ್ತಿದ್ದರು. ಅವನೊಬ್ಬ ಐತಿಹಾಸಿಕ ನಾಯಕನಾಗಿರುತ್ತಿದ್ದ. ಆದರೆ ಭಾರತದ ಮೊಟ್ಟ ಮೊದಲ ಸ್ವಾತಂತ್ರ್ಯ ಹೋರಾಟಕ್ಕೂ ಮೊದಲೇ ಬ್ರಿಟೀಷರಿಗೆ ನಡುಕ ಹುಟ್ಟಿಸಿದ್ದ ಮಹಾವೀರನ ಬಗ್ಗೆ ನಮ್ಮ ಇತಿಹಾಸದ ಪುಟಗಳಲ್ಲಿ ಸರಿಯಾದ  ಮಾಹಿತಿಯಿಲ್ಲ. ನಮ್ಮ ನಾಯಕರಿಗೆ ಅವನು ಬೇಕಿಲ್ಲ. ಬಗ್ಗೆ ಬಹುತೇಕ ದೇಶವಾಸಿಗಳಿಗೆ ತಿಳಿದೇ ಇಲ್ಲ. ಇದು ದುರಂತವಲ್ಲವೇ?.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!