ಹೊಸ ದಿಗಂತ ವರದಿ, ಮಡಿಕೇರಿ:
ಕಷ್ಟಗಳನ್ನು ಬಗೆಹರಿಸಿಕೊಡುವುದಾಗಿ ಮನೆಯ ಒಳಗಡೆ ಬಂದು ಮಹಿಳೆಯ ತಲೆಯ ಮೇಲೆ ಕೈಯಿಟ್ಟು ನಿಮಗೆ ಒಳ್ಳೆಯದಾಗುತ್ತದೆ ಎಂದು ನಂಬಿಸಿ ಮೋಸದಿಂದ ಚಿನ್ನಾಭರಣಮತ್ತು ಹಣವನ್ನು ದೋಚಿದ್ದ ಮಹಿಳೆಯರನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು
ಯಶಸ್ವಿಯಾಗಿದ್ದಾರೆ.
ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಬೈಚನಹಳ್ಳಿಯ ಮಹಿಳೆಯೊಬ್ಬರ ಮನೆಗೆ ಇತ್ತೀಚೆಗೆ ಹಣೆಗೆ ವಿಭೂತಿ ಧರಿಸಿ, ಕುತ್ತಿಗೆಯಲ್ಲಿ ರುದ್ರಾಕ್ಷಿ ಮಣಿ ಹಾಕಿಕೊಂಡು ಕೈಯಲ್ಲಿ ಗಂಟೆ ಹಿಡಿದು ಬಂದ ಮಹಿಳೆಯೊಬ್ಬಳು,’ ನಿಮ್ಮ ಕಷ್ಟಗಳನ್ನು ಬಗೆಹರಿಸಿಕೊಡುತ್ತೇನೆ’ ಎಂದು ಹೇಳಿ ಮನೆಯ ಒಳಗಡೆ ಬಂದು ನಿಮಗೆ ಆರೋಗ್ಯ ಸರಿ ಇಲ್ಲದಿದ್ದರೆ ನಾನು ಎಲ್ಲವನ್ನು ಬಗೆಹರಿಸಿಕೊಡುತ್ತೇನೆಂದು ತಲೆಯ ಮೇಲೆ ಕೈಯಿಟ್ಟು ನಿಮಗೆ ಒಳ್ಳೆಯದಾಗುತ್ತದೆ ಎಂದು ನಂಬಿಸಿ ಮೋಸದಿಂದ ಚಿನ್ನಾಭರಣಗಳನ್ನು ಮತ್ತು ಹಣವನ್ನು ದೋಚಿ ಪರಾರಿಯಾಗಿದ್ದಳು.
ಈ ಪ್ರಕರಣವನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು.
ಅದರಂತೆ ಕಾರ್ಯ ಪ್ರವೃತ್ತರಾದ ತಂಡ ಆರೋಪಿಗಳನ್ನು ಕುಶಾಲನಗರ- ಕೊಪ್ಪ ಕಾಫಿ ಡೇ ಸಮೀಪದಲ್ಲಿರುವ ರಿಲಯನ್ಸ್ ಪೆಟ್ರೋಲ್ ಬಂಕ್ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಬಂಧಿತರನ್ನು ಮೂಲತಃ ಹಾವೇರಿಯ ರಾಣಿಬೆನ್ನೂರು ಅಡವಿ ಆಂಜನೇಯ ಬಡಾವಣೆ ನಿವಾಸಿ ಹಾಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ವೇದಾವತಿ ನಗರದವರೆನ್ನಲಾದ. ಲಕ್ಷ್ಮಿ (22), ಲಕ್ಷ್ಮಿ (23) ಸುಜಾತ( 22) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 135 ಗ್ರಾಂ ಚಿನ್ನಾಭರಣ,27,000 ನಗದು ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ
ಹಾಗೂ ಸೋಮವಾರಪೇಟೆ ಉಪ ಅಧೀಕ್ಷಕ ಹೆಚ್.ಎಂ. ಶೈಲೇಂದ್ರ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಎಂ.ಮಹೇಶ್ ನೇತೃತ್ವದಲ್ಲಿ ಕುಶಾಲನಗರ ನಗರ ಠಾಣಾಧಿಕಾರಿ ಗಣೇಶ್, ಎಎಸ್ ಐ ಗೋಪಾಲ, ಸಿಬ್ಬಂದಿಗಳಾದ ಉಮೇಶ್, ಸುದೀಶ್
ಕುಮಾರ್, ರಂಜಿತ್, ನಿಶಾ, ಸೌಮ್ಯ ಕಾರ್ಯಾಚರಣೆ ನಡೆಸಿದ್ದರು.
ಈ ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳು ಭಾಗಿಯಾಗಿರುವ ಸಾಧ್ಯತೆಗಳದ್ದು ಆರೋಪಿಗಳ ಪತ್ತೆ ಬಗ್ಗೆ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ತಿಳಿಸಿದ್ದಾರೆ.